ಕರಾವಳಿ ವಾಯ್ಸ್ ನ್ಯೂಸ್
ಹೊನ್ನಾವರ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿದ್ದ ಹಿಟಾಚಿಗೆ ಗುರುವಾರ ಬೆಳಿಗ್ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಯಂತ್ರ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ತಾಲೂಕಿನ ಕರ್ಕಿ ಸಮೀಪ ಸಂಭವಿಸಿದೆ.
ಬಾಣೇಶ್ವರ ಗ್ರಾನೈಟ್ಸ್ ಮತ್ತು ಟೈಲ್ಸ್ ಸಂಸ್ಥೆಯ ಜಾಗದಲ್ಲಿ ಬುಧವಾರ ಕೆಲಸ ಮುಗಿಸಿ ಹಿಟಾಚಿಯನ್ನು ನಿಲ್ಲಿಸಲಾಗಿತ್ತು. ಆದರೆ ಗುರುವಾರ ಬೆಳಿಗ್ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಹೊತ್ತಿ ಉರಿಯತೊಡಗಿದ ಯಂತ್ರವನ್ನು ಸ್ಥಳೀಯರು ಗಮನಿಸಿ ತಕ್ಷಣವೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು.
ಸೂಚನೆ ಪಡೆದು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರೂ, ಆಗಲೇ ಹಿಟಾಚಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು.
ಪ್ರಾಥಮಿಕ ಮಾಹಿತಿ ಪ್ರಕಾರ ಬ್ಯಾಟರಿ ಸ್ಫೋಟದಿಂದ ಬೆಂಕಿ ಬಿದ್ದಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

