ಕರಾವಳಿ ವಾಯ್ಸ್ ನ್ಯೂಸ್ 

ಕರಾಚಿ: ಬಾಲಿವುಡ್‌ನ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman khan) ನೀಡಿದ ಹೇಳಿಕೆ ಪಾಕಿಸ್ತಾನದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಮಧ್ಯಪ್ರಾಚ್ಯದಲ್ಲಿ ವಲಸಿಗ ಸಮುದಾಯಗಳ ಬಗ್ಗೆ ಮಾತನಾಡುವ ವೇಳೆ ಅವರು ಬಲೂಚಿಸ್ತಾನ ಮತ್ತು ಪಾಕಿಸ್ತಾನವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ್ದರಿಂದ, ಪಾಕಿಸ್ತಾನ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ.

ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ಜಾಯ್ ಫೋರಮ್ 2025 ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಹಾಗೂ ಆಮಿರ್ ಖಾನ್ ಸೇರಿದಂತೆ ಹಲವಾರು ತಾರೆಯರೊಂದಿಗೆ ಭಾಗವಹಿಸಿದ್ದ ಸಲ್ಮಾನ್ ಖಾನ್ ಮಾತನಾಡಿದಾಗ, “ಸೌದಿ(Soudi) ಯಲ್ಲಿ ಹಿಂದಿ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿವೆ. ತಮಿಳು, ತೆಲುಗು ಅಥವಾ ಮಲಯಾಳಿ ಚಿತ್ರಗಳೂ ಕೋಟಿ ಕೋಟಿ ವ್ಯವಹಾರ ಮಾಡುತ್ತಿವೆ, ಏಕೆಂದರೆ ಇಲ್ಲಿ ಬಲೂಚಿಸ್ತಾನ, ಅಫ್ಘಾನಿಸ್ತಾನ, ಪಾಕಿಸ್ತಾನದಿಂದ ಬಂದ ಅನೇಕ ಜನರು ಕೆಲಸ ಮಾಡುತ್ತಿದ್ದಾರೆ,” ಎಂದು ಹೇಳಿದ್ದಾರೆ.

ಈ ಹೇಳಿಕೆಯನ್ನು ಪಾಕಿಸ್ತಾನ(Pakistan) ಸರ್ಕಾರವು ರಾಷ್ಟ್ರದ ಅವಮಾನವೆಂದು ಪರಿಗಣಿಸಿ, ಸಲ್ಮಾನ್ ಖಾನ್ ಅವರನ್ನು ‘ಭಯೋತ್ಪಾದಕ’ (terrorist) ಎಂದು ಘೋಷಿಸಿದೆ. ವರದಿಗಳ ಪ್ರಕಾರ, ಪಾಕಿಸ್ತಾನದ 1997ರ ಭಯೋತ್ಪಾದನಾ ನಿಗ್ರಹ ಕಾಯ್ದೆಯ ನಾಲ್ಕನೇ ಶೆಡ್ಯೂಲ್‌ನಡಿಯಲ್ಲಿ ಅವರ ಹೆಸರನ್ನು ಸೇರಿಸಲಾಗಿದೆ. ಈ ಪಟ್ಟಿಯಲ್ಲಿ ಭಯೋತ್ಪಾದಕ ಸಂಪರ್ಕಗಳ ಶಂಕಿತ ವ್ಯಕ್ತಿಗಳು ಸೇರುತ್ತಾರೆ ಹಾಗೂ ಅವರ ಚಲನೆಗೆ ಕಟ್ಟುನಿಟ್ಟಿನ ಕಣ್ಗಾವಲು ಮತ್ತು ನಿರ್ಬಂಧಗಳು ವಿಧಿಸಲಾಗುತ್ತವೆ.

ಇದೇ ವೇಳೆ, ಬಲೂಚ್ ಪ್ರತ್ಯೇಕತಾವಾದಿ ನಾಯಕರು ಸಲ್ಮಾನ್ ಖಾನ್ ಅವರ ಹೇಳಿಕೆಯನ್ನು ಸ್ವಾಗತಿಸಿದ್ದಾರೆ. ಬಲೂಚ್ ಸ್ವಾತಂತ್ರ್ಯ ಹೋರಾಟಗಾರ ಮೀರ್ ಯಾರ್ ಬಲೂಚ್ ಅವರು, “ಸಲ್ಮಾನ್ ಖಾನ್ ಅವರ ಮಾತು ಆರು ಕೋಟಿ ಬಲೂಚ್ ಜನತೆಗೆ ಹೆಮ್ಮೆ ತಂದಿದೆ,” ಎಂದು ಹೇಳಿದ್ದಾರೆ.

ಸಲ್ಮಾನ್ ಖಾನ್ ಅವರ ಈ ಹೇಳಿಕೆಯು ಈಗ ರಾಜತಾಂತ್ರಿಕ ವಿವಾದದ ರೂಪ ಪಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

 

Please Share: