ಕರಾವಳಿ ವಾಯ್ಸ್ ನ್ಯೂಸ್ 

ಸಿದ್ದಾಪುರ: ತಾಲೂಕಿನ ಬಾಳೆಗದ್ದೆ ಬಸ್ ನಿಲ್ದಾಣದ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸ್ಕಿಡ್ ಆಗಿ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.

ಮೃತನನ್ನು ಮೂಲತಃ ಶಿರಸಿ ತಾಲೂಕಿನ ಬನವಾಸಿ ಕಾಮನಗಲ್ಲಿಯ ನಿವಾಸಿ ಹಾಗೂ ಪ್ರಸ್ತುತ ಸಿದ್ದಾಪುರದ ನಾಣಕಟ್ಟಾದಲ್ಲಿ ವಾಸವಾಗಿದ್ದ ಸೋಮಶೇಖರ ನಾಗೇಶ ಆಚಾರಿ (41) ಎಂದು ಗುರುತಿಸಲಾಗಿದೆ.

ಮಾರ್ಚ್ 8ರಂದು ರಾತ್ರಿ ಸುಮಾರು 11:30ರ ವೇಳೆ ಸೋಮಶೇಖರ ಅವರು KA-31 EG-8730 ನಂಬರಿನ ಮೋಟಾರ್ ಸೈಕಲ್‌ನಲ್ಲಿ ಹರೀಶಿ ಕಡೆಯಿಂದ ನಾಣಕಟ್ಟಾ ಕಡೆಗೆ ತೆರಳುತ್ತಿದ್ದರು. ಈ ವೇಳೆ ಸಿದ್ದಾಪುರ ತಾಲೂಕಿನ ಬಾಳೆಗದ್ದೆ ಬಸ್ ನಿಲ್ದಾಣದ ಬಳಿ ಇರುವ ಕೊಡಗದ್ದೆ ಊರಿನ ತಿರುವಿನಲ್ಲಿ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿದ್ದಿದೆ. ಪರಿಣಾಮವಾಗಿ ಅವರ ತಲೆಯ ಹಿಂಭಾಗಕ್ಕೆ ಗಂಭೀರ ಒಳಪೆಟ್ಟು ಬಿದ್ದಿದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ತಲೆಗೆ ಬಿದ್ದ ಪೆಟ್ಟು ತೀವ್ರವಾಗಿದ್ದರಿಂದ ಸತತ ಮೂರು ದಿನಗಳ ಕಾಲ ಚಿಕಿತ್ಸೆ ಪಡೆದ ಬಳಿಕ ಬುಧವಾರ ರಂದು ಬೆಳಗ್ಗೆ ಸುಮಾರು 10:20ಕ್ಕೆ ಅವರು ಮೃತಪಟ್ಟಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಕಾರ್ಯದಲ್ಲಿ ನಿರತರಾಗಿದ್ದರಿಂದ ದೂರು ನೀಡಲು ವಿಳಂಬವಾಗಿದೆ ಎಂದು ಮೃತನ ಸಂಬಂಧಿ ನಾಣಕಟ್ಟಾ ನಿವಾಸಿ ಗಿರೀಶ ರಾಮಾ ಆಚಾರಿ (43) ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

 

 

Please Share: