ಕರಾವಳಿ ವಾಯ್ಸ್ ನ್ಯೂಸ್
ಗೋಕರ್ಣ: ಇಲ್ಲಿನ ಮುಖ್ಯ ಕಡಲತೀರದಲ್ಲಿ ಶನಿವಾರ ಒಂದೇ ದಿನ ನಡೆದ ಎರಡು ಪ್ರತ್ಯೇಕ ಅವಘಡಗಳಲ್ಲಿ ಸಮುದ್ರದ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ಒಟ್ಟು ಎಂಟು ಮಂದಿ ಪ್ರವಾಸಿಗರನ್ನು ಜೀವರಕ್ಷಕ ಸಿಬ್ಬಂದಿ ಹಾಗೂ ಪ್ರವಾಸಿ ಮಿತ್ರ ಸಿಬ್ಬಂದಿ ಸಮಯಕ್ಕೆ ತಕ್ಕಂತೆ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಮೊದಲ ಅವಘಡ ಶನಿವಾರ ಮಧ್ಯಾಹ್ನ ನಡೆದಿದ್ದು, ಕೊಪ್ಪಳ ಜಿಲ್ಲೆಯ ಮೂಲದ 12 ಮಂದಿ ಪ್ರವಾಸಕ್ಕೆ ಗೋಕರ್ಣಕ್ಕೆ ಬಂದಿದ್ದರು. ಸಮುದ್ರದಲ್ಲಿ ಈಜಾಡಲು ತೆರಳಿದ ವೇಳೆ ನಾಲ್ವರು ಸಮುದ್ರ ಸುಳಿಗೆ ಸಿಲುಕಿ ಪ್ರಾಣಾಪಾಯ ಎದುರಿಸಿದರು.
ರಕ್ಷಿಸಲ್ಪಟ್ಟ ಪ್ರವಾಸಿಗರು ಅಭಿಷೇಕ್ (21), ಹನುಮಂತ ವಳಗೇರಿ, ಹುಸೇನ್ ಸಾಬ್ (18), ಶಿವರಾಜ್ ಮರಿಯಪ್ಪ ಯಾಟಿ (18) ಹಾಗೂ ಮುತ್ತುರಾಜ್ ಮೈಲಾರಪ್ಪ ಕೊಡಲಗಿ (24) ಆಗಿದ್ದಾರೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಜೀವರಕ್ಷಕ ಸಿಬ್ಬಂದಿಗಳಾದ ಮೋಹನ ಅಂಬಿಗ, ಶಿವಪ್ರಸಾದ್ ಅಂಬಿಗ ಹಾಗೂ ರೋಷನ್ ಖಾರ್ವಿ ತಕ್ಷಣ ಸಮುದ್ರಕ್ಕಿಳಿದು ಸಾಹಸಿಕವಾಗಿ ರಕ್ಷಣಾ ಕಾರ್ಯ ನಡೆಸಿದರು. ಇವರಿಗೆ ಪ್ರವಾಸಿ ಮಿತ್ರ ಸಿಬ್ಬಂದಿ ಶೇಖರ್ ಹರಿಕಂತ್ರ ಹಾಗೂ ಗೋಕರ್ಣ ಮೇನ್ ಬೀಚ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಗಳಾದ ಕಮಲಾಕರ್ ಹೊಸಕಟ್ಟ, ದೀಪಕ್ ಗೌಡ ಮತ್ತು ಚಿದಾನಂದ ಲಕ್ಕುಮನೆ ಸಹಕಾರ ನೀಡಿದರು.
ಇದಾದ ಕೆಲವೇ ಗಂಟೆಗಳ ಬಳಿಕ ಶನಿವಾರ ಸಂಜೆ ನಡೆದ ಎರಡನೇ ಅವಘಡದಲ್ಲಿ ಚಿತ್ರದುರ್ಗ ಜಿಲ್ಲೆಯ ಮೂಲದ 12 ಮಂದಿ ಪ್ರವಾಸಿಗರು ಸಮುದ್ರದಲ್ಲಿ ಈಜಾಡಲು ತೆರಳಿದಾಗ ಮತ್ತೆ ನಾಲ್ವರು ಸಮುದ್ರ ಸುಳಿಗೆ ಸಿಲುಕಿ ಅಪಾಯಕ್ಕೆ ಒಳಗಾದರು.
ರಕ್ಷಿಸಲ್ಪಟ್ಟವರು ಅವಿನಾಶ್ ತಿಪ್ಪೇಸ್ವಾಮಿ (20), ರಘು ತಿಪ್ಪೇಸ್ವಾಮಿ (21), ಅಜಯ್ ಗಂಗಪ್ಪ (26) ಹಾಗೂ ಅಶ್ವತ್ (14) ಆಗಿದ್ದಾರೆ.
ಈ ಸಂದರ್ಭದಲ್ಲಿಯೂ ಜೀವರಕ್ಷಕ ಸಿಬ್ಬಂದಿಗಳಾದ ಮೋಹನ ಅಂಬಿಗ, ರೋಷನ್ ಖಾರ್ವಿ ಹಾಗೂ ಶಿವಪ್ರಸಾದ್ ಅಂಬಿಗ ಧೈರ್ಯದಿಂದ ಕಾರ್ಯಾಚರಣೆ ನಡೆಸಿ ನಾಲ್ವರ ಪ್ರಾಣ ಉಳಿಸಿದರು. ಇವರಿಗೆ ಪ್ರವಾಸಿ ಮಿತ್ರ ಸಿಬ್ಬಂದಿ ಶೇಖರ್ ಹರಿಕಂತ್ರ ಹಾಗೂ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಗಳಾದ ಚಿದಾನಂದ ಲಕ್ಕುಮನೆ, ಮಹಾಬಲೇಶ್ವರ ಲಕ್ಕುಮನೆ, ಜಗ್ಗು ಹೊಸಕಟ್ಟ, ದೀಪಕ್ ಗೌಡ ಹಾಗೂ ದರ್ಶನ್ ಹರಿಕಂತ್ರ ಸಹಾಯ ಹಸ್ತ ನೀಡಿದರು.
ಒಂದೇ ದಿನದಲ್ಲಿ ನಡೆದ ಎರಡು ಪ್ರತ್ಯೇಕ ಘಟನಗಳಲ್ಲಿ ಎಂಟು ಮಂದಿಯ ಪ್ರಾಣ ಉಳಿಸುವ ಮೂಲಕ ಜೀವರಕ್ಷಕ ಸಿಬ್ಬಂದಿ ತಮ್ಮ ಕಾರ್ಯಕ್ಷಮತೆ ಹಾಗೂ ಮಾನವೀಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಸಾರ್ವಜನಿಕರು ಸಮುದ್ರದಲ್ಲಿ ಇಳಿಯುವಾಗ ಎಚ್ಚರಿಕೆ ವಹಿಸಬೇಕು ಹಾಗೂ ಜೀವರಕ್ಷಕರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
