ಕಾರವಾರ: ನಗರದ ಬಿಣಗಾದಲ್ಲಿ ತನ್ನ ಮಟನ್ ಅಂಗಡಿಯನ್ನು ನಗರಸಭೆ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಿದ ಹಿನ್ನೆಲೆ, ಮನನೊಂದು ಬಡ ಮಹಿಳೆ ಬುಧವಾರ ನಗರಸಭೆ ಕಚೇರಿಯ ಮುಂದೆ ಮಟನ್ ಹಿಡಿದು ಬಂದು ನ್ಯಾಯ ಕೋರಿ ಕಣ್ಣೀರು ಹಾಕಿದ ಘಟನೆ ನಡೆದಿದೆ.
ನ್ಯಾಯ ಕೇಳುತ್ತಾ ಸ್ಥಳದಲ್ಲೇ ಕುಸಿದು ಬಿದ್ದ ಮಹಿಳೆಯನ್ನು ಸ್ಥಳೀಯರು ಸಹಾಯ ಮಾಡಿ ಚೇತರಿಸಿದರು. ಹೊಟ್ಟೆಪಾಡಿಗಾಗಿ ನಡೆಸಿಕೊಂಡಿದ್ದ ಅಂಗಡಿಯನ್ನು ಕಳೆದುಕೊಂಡ ನೋವು ನೆರೆದವರ ಮನವನ್ನೇ ಕಲಕಿತು.
ಬಿಣಗಾದ ಸಾರ್ವಜನಿಕ ಗ್ರಂಥಾಲಯದ ಬಳಿ ಅನಧಿಕೃತ ಮಟನ್ ಅಂಗಡಿ ನಡೆಸುತ್ತಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ, ನ್ಯಾಯಾಲಯದ ಸೂಚನೆಯಂತೆ ನಗರಸಭೆ ಅಧಿಕಾರಿಗಳು ಅಂಗಡಿಯನ್ನು ತೆರವುಗೊಳಿಸಿದ್ದಾರೆ. ಆದರೆ ಈ ಕ್ರಮ ಏಕಾಏಕಿ ಜರುಗಿದ್ದು, ವ್ಯಾಪಾರ ಮಾಡುತ್ತಿದ್ದ ಅವಧಿಯಲ್ಲಿ ವಾರ್ಡ್ ಸದಸ್ಯರಿಗೂ ಮಾಹಿತಿ ನೀಡಲಿಲ್ಲವೆಂದು ಸ್ಥಳೀಯರು ಆರೋಪಿಸಿದರು.
ನಗರಸಭೆಯ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯರು ಮಹಿಳೆಯೊಂದಿಗೆ ನಗರಸಭೆ ಎದುರು ಪ್ರತಿಭಟನೆ ನಡೆಸಿ, ಅಧಿಕಾರಿಗಳ ದರ್ಪವನ್ನು ಖಂಡಿಸಿದರು. ನಗರಸಭೆ ಮಹಿಳೆಗೆ ಪರ್ಯಾಯವಾಗಿ ಮೀನು ಮಾರುಕಟ್ಟೆಯಲ್ಲಿ ಜಾಗ ನೀಡಲಾಗಿದೆ ಎಂದು ತಿಳಿಸಿದರೂ, “ಅಲ್ಲಿ ಕುರಿ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಇಲ್ಲ” ಎಂದು ಸ್ಥಳೀಯರು ಆಕ್ಷೇಪಿಸಿದರು.
ಇದೇ ವೇಳೆ, “ಬಿಣಗಾದ ಸಾರ್ವಜನಿಕ ಗ್ರಂಥಾಲಯವೇ ಸೂಕ್ತ ಸ್ಥಳದಲ್ಲಿ ಇಲ್ಲ. ಗ್ರಂಥಾಲಯದ ಹೆಸರಿನಲ್ಲಿ ಬಡ ಮಹಿಳೆಯ ಜೀವನಾಧಾರವಾಗಿದ್ದ ಅಂಗಡಿಯನ್ನು ತೆರವುಗೊಳಿಸಿರುವುದು ಅನ್ಯಾಯ. ಇಂತಹ ಗ್ರಂಥಾಲಯ ನಮಗೆ ಬೇಡ” ಎಂದು ಸ್ಥಳೀಯರು ಕಿಡಿಕಾರಿದರು. ಅವರು ಗ್ರಂಥಾಲಯ ಕಟ್ಟಡವನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.


