ಕಾರವಾರ: ತಾಲೂಕಿನ ಅಣಶಿ ಘಟ್ಟದಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಕೊಲೆ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಆಕೆಯ ಪತಿಯನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ.
ಬೀದರ್ ಜಿಲ್ಲೆಯ ಪರ್ವೀನ್ ಬೇಗಂ (45) ಹತ್ಯೆಯಾದ ಮಹಿಳೆ. ಆಕೆಯ ಪತಿ ಇಸ್ಮಾಯ್ಲ್ ದಪೇದಾರ್ ಹಾಗೂ ಅವನ ಸ್ನೇಹಿತರಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಹೆಂಡತಿಯೊಂದಿಗೆ ಉತ್ತಮ ಸಂಬಂಧ ಇಲ್ಲದ ಇಸ್ಮಾಯ್ಲ್, ಆ.29ರಂದು ಆಸ್ಪತ್ರೆಗೆ ಬರುವ ನೆಪದಲ್ಲಿ ಪರ್ವೀನ್ ಅವರನ್ನು ತಾಲೂಕಿನ ಹಳಗಾಕ್ಕೆ ಕರೆದುಕೊಂಡು ಬಂದಿದ್ದ. ಈ ವೇಳೆ ಮೊದಲು ಸಂಚು ರೂಪಿಸಿದ್ದ ಆತ ತನ್ನ ಸ್ನೇಹಿತರನ್ನು ಸಹ ಕರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕಿತ್ಸೆಯ ಬಳಿಕ ಕಾರಿನಲ್ಲಿ ಹಿಂತಿರುಗುವಾಗ, ಕದ್ರಾ ಬಳಿ ತಿನಿಸು ನೀಡಿದ್ದು, ನಂತರ ಕಾರಿನಲ್ಲಿದ್ದ ಬೆಡ್‌ಶೀಟ್‌ನಿಂದ ಪರ್ವೀನ್ ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ. ಬಳಿಕ ಶವವನ್ನು ಅಣಶಿ ಘಟ್ಟದ ವ್ಯೂ ಪಾಯಿಂಟ್ ಬಳಿ ಎಸೆದುಬಿಟ್ಟಿದ್ದಾರೆ.
ಇದರ ಮಧ್ಯೆ, ಸೆ.1ರಂದು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪತ್ನಿ ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ್ದ ಇಸ್ಮಾಯ್ಲ್, ತನಿಖೆಯ ವೇಳೆ ಪೊಲೀಸರ ತೀವ್ರ ವಿಚಾರಣೆಗೆ ಸಿಲುಕಿದ. ಈ ಸಂದರ್ಭದಲ್ಲಿ ಆತನೇ ಪತ್ನಿಯ ಹತ್ಯೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಸದ್ಯ ಇಸ್ಮಾಯ್ಲ್ ಪೊಲೀಸರ ವಶದಲ್ಲಿದ್ದು, ಉಳಿದ ಇಬ್ಬರು ಆರೋಪಿಗಳ ಪತ್ತೆಗೆ ಚಿತ್ತಾಕುಲ ಠಾಣಾ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.


