ಕಾರವಾರ: ಜನಪ್ರಿಯ ಯೂಟ್ಯೂಬರ್‌ ಕ್ವಾಜಾ ಬಂದೇನ್‌ವಾಜಾ ಮಹಮದ್‌ ಹನೀಫ್‌ ಶಿರಹಟ್ಟಿ ಅಲಿಯಾಸ್‌ ಮುಕಳೆಪ್ಪ ವಿರುದ್ಧ ಬಜರಂಗದಳ ಕಾರ್ಯಕರ್ತರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ, ಮುಕಳೆಪ್ಪ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಉಪ ನೋಂದಣಿ ಕಚೇರಿಯಲ್ಲಿ ಸುಳ್ಳು ದಾಖಲೆಗಳನ್ನು ನೀಡಿ ಹಿಂದೂ ಯುವತಿ ಗಾಯತ್ರಿ ಜಾಲಿಹಾಳರನ್ನು ಮದುವೆಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಜೊತೆಗೆ, ತಮ್ಮ ಯೂಟ್ಯೂಬ್‌ ವೀಡಿಯೊಗಳಲ್ಲಿ ಹಿಂದೂ ಧರ್ಮವನ್ನು ಅವಮಾನಿಸುವ ರೀತಿಯ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ ಎಂದು ಕಾರ್ಯಕರ್ತರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ವರ್ಷದ ಜೂನ್‌ 5ರಂದು ಮುಕಳೆಪ್ಪ ಮದುವೆಯಾಗಿದ್ದು, ದಾಖಲೆಗಳಲ್ಲಿ ನಕಲಿ ವಿಳಾಸ ನೀಡಲಾಗಿದೆ ಎಂಬುದೂ ದೂರುದಲ್ಲಿದೆ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ದಂಪತಿಯನ್ನು ವಿಚಾರಣೆಗಾಗಿ ಕರೆಸಿಕೊಂಡಾಗ ಪತ್ನಿ ಗಾಯತ್ರಿ, “ನನಗೆ ಯಾವುದೇ ಸಮಸ್ಯೆ ಇಲ್ಲ” ಎಂದು ಹೇಳಿರುವುದರಿಂದ ಎಫ್‌ಐಆರ್‌ ದಾಖಲಾಗಿಲ್ಲ. ಯಾರನ್ನೂ ವಶಕ್ಕೆ ಪಡೆಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮುಕಳೆಪ್ಪ ಯಾರು?

ಹಾಸ್ಯಾಧಾರಿತ ವೀಡಿಯೊಗಳಿಂದ ಜನಪ್ರಿಯರಾದ ಮುಕಳೆಪ್ಪ, ಯೂಟ್ಯೂಬ್‌ನಲ್ಲಿ 24 ಲಕ್ಷಕ್ಕಿಂತ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ. ಕುಟುಂಬ, ಸ್ನೇಹಿತರ ಜಗಳ, ಸಾಮಾಜಿಕ ವಿಷಯಗಳ ಆಧಾರಿತ ಕಾಮಿಡಿ ಸ್ಕಿಟ್‌ಗಳನ್ನು ಸ್ಥಳೀಯ ಭಾಷೆಯಲ್ಲಿ ತಯಾರಿಸುತ್ತಿದ್ದು, ಅವರ ವೀಡಿಯೊಗಳಿಗೆ ಲಕ್ಷಾಂತರ ವೀಕ್ಷಣೆಗಳಿವೆ.

ದೂರಿನ ಆರೋಪಗಳು

ಮುಕಳೆಪ್ಪ ತಮ್ಮ ವೀಡಿಯೊಗಳಲ್ಲಿ ಹಿಂದೂ ಯುವತಿಯರನ್ನು ತೋರಿಸಿ ಪ್ರಥಮ ರಾತ್ರಿ ದೃಶ್ಯಗಳನ್ನು ರೂಪಿಸುವುದು, ಗಣೇಶ ಹಬ್ಬದ ಬಗ್ಗೆ ಅವಮಾನಕರವಾಗಿ ಮಾತನಾಡುವುದು, ಲವ್‌ ಜಿಹಾದ್‌ಗೆ ಪ್ರಚೋದಿಸುವಂತ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ ಎಂದು ಬಜರಂಗದಳ ಕಾರ್ಯಕರ್ತರು ದೂರಿನಲ್ಲಿ ಆರೋಪಿಸಿದ್ದಾರೆ. ಅವರ ಖಾತೆಗಳನ್ನು ನಿಷೇಧಿಸಬೇಕೆಂದು ಕೂಡ ಮನವಿ ಮಾಡಿದ್ದಾರೆ.

 

 

Please Share: