ಕಾರವಾರ:

ಉತ್ತರ ಕನ್ನಡ ಜಿಲ್ಲೆಯ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಹಾಗೂ ಎಂ.ಸಿ.ಎ ಅಧ್ಯಕ್ಷ ಸತೀಶ್ ಸೈಲ್ ಅವರನ್ನು ಇಡಿ ಅಧಿಕಾರಿಗಳು ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಕಳೆದ ಆ.13 ರಂದು ಕಾರವಾರ ತಾಲೂಕಿನ ಸದಾಶಿವಗಡದಲ್ಲಿರುವ ಸೈಲ್ ಅವರ ಮನೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ದಾಳಿ ನಡೆದಿತ್ತು.

ದಾಳಿಯ ವೇಳೆ ಮನೆಯಿಂದ ಸುಮಾರು 1.41 ಕೋಟಿ ನಗದು ಹಾಗೂ ಬ್ಯಾಂಕ್ ಲಾಕರ್‌ನಲ್ಲಿ 6.75 ಕೆಜಿ ಚಿನ್ನಾಭರಣ ವಶಕ್ಕೆ ಪಡೆದಿದ್ದರು. ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಸೈಲ್ ಅವರನ್ನು ನಿನ್ನೆ ವಿಚಾರಣೆಗೆ ಹಾಜರುಪಡಿಸಲು ಇಡಿ ಅಧಿಕಾರಿಗಳು ಕರೆದಿದ್ದರು. ಇಂದು ವಿಚಾರಣೆ ನಡೆಸಿದ ನಂತರ, ಸಂಜೆ ಅವರನ್ನು ವಶಕ್ಕೆ ಪಡೆದಿದ್ದಾರೆ. ಸೈಲ್ ಅವರನ್ನು ಜನಪ್ರತಿನಿಧಿ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

 

Please Share: