ಕರಾವಳಿ ವಾಯ್ಸ್ ನ್ಯೂಸ್
ಹುಬ್ಬಳ್ಳಿ/ಮುಂಡಗೋಡ: ಮಾಹಿತಿ ಹಕ್ಕು ಕಾಯ್ದೆಯ ಅಸ್ತ್ರವನ್ನು ದುರುಪಯೋಗಪಡಿಸಿಕೊಂಡು ಅಧಿಕಾರಿಗಳು ಮತ್ತು ಖಾಸಗಿ ಸಂಸ್ಥೆಗಳನ್ನು ಬೆದರಿಸಿ ಹಣ ಕೀಳುತ್ತಿದ್ದ “ಆರ್ಟಿಐ ಗ್ಯಾಂಗ್” ಕೊನೆಗೂ ಪೊಲೀಸರ ಬಲೆಗೆ ಸಿಕ್ಕಿದೆ!
ಹುಬ್ಬಳ್ಳಿಯ ಗೋಕಲ ಠಾಣೆ ಪೊಲೀಸರು ನಡೆಸಿದ ನಿಖರ ಪ್ಲ್ಯಾನ್ನಿಂದ ಈ ಕುತೂಹಲಕರ ಪ್ರಕರಣ ಬೆಳಕಿಗೆ ಬಂದಿದೆ.
ಗುರುವಾರ ನಡೆದ ಕಾರ್ಯಾಚರಣೆಯಲ್ಲಿ ಐವರನ್ನ ಬಂಧಿಸಿ ₹1.70 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ಮುಂಡಗೋಡದ ವಿರೇಶಕುಮಾರ್ ಮಹದೇಶ್ವರ ಲಿಂಗದಾಳ, ಮಹದೇಶ್ವರ ಲಿಂಗದಾಳ, ಮಹಾಬಲೇಶ್ವರ ಶಿರೂರ್, ಶಿವಪ್ಪ ಬೊಮ್ಮನಹಳ್ಳಿ ಹಾಗೂ ಗದಗಿನ ಮಂಜುನಾಥ್ ಹದ್ದಣ್ಣವರ ಬಂಧಿತರಾದವರಾಗಿದ್ದಾರೆ.
1.5 ಕೋಟಿ ಬೇಡಿಕೆ – ಪೊಲೀಸರ ಬಲೆ
ಹುಬ್ಬಳ್ಳಿಯ ಖಾಸಗಿ ಸೊಸೈಟಿಯೊಂದರ ಮೇಲೆ ಸುಳ್ಳು ಆರೋಪ ಮಾಡಿ, ಅದರ ವಿರುದ್ಧ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ, “ಮಾಹಿತಿ ನೀಡದಿದ್ದರೆ 1.5 ಕೋಟಿ ನೀಡಿ” ಎಂದು ಬೆದರಿಕೆ ಹಾಕಿದ್ದ ಆರೋಪಿಗಳ ಮೇಲೆ ಸೊಸೈಟಿಯವರು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ತಕ್ಷಣ ತಂತ್ರ ರೂಪಿಸಿ, ಸೊಸೈಟಿಯವರ ಸಹಕಾರದಲ್ಲಿ ನಾಟಕೀಯ ಬಲೆ ಹೆಣೆದರು. ಗುರುವಾರ ಆರೋಪಿಗಳಿಗೆ “ಹಣ ನೀಡುತ್ತೇವೆ” ಎಂದು ಹುಬ್ಬಳ್ಳಿಗೆ ಕರೆಸಿದರು. ಅವರು ನಗದು ಸ್ವೀಕರಿಸುವ ಕ್ಷಣದಲ್ಲಿ ಪೊಲೀಸರು ಕುತ್ತಿಗೆಯ ಮೇಲೆ ಕೈ ಹಾಕಿ ಬಂಧಿಸಿದರು!
ಘಟನಾಸ್ಥಳದಲ್ಲೇ ಆರೋಪಿಗಳಿಂದ ₹1.70 ಲಕ್ಷ ವಶಪಡಿಸಿಕೊಳ್ಳಲಾಗಿದೆ.
ಮುಂಡಗೋಡ, ಶಿರಸಿ, ಹಾವೇರಿ, ಶಿಗ್ಗಾವಿ ಸೇರಿ ವಿವಿಧ ಕಡೆಗಳಲ್ಲಿ ಈ ಗ್ಯಾಂಗ್ ಇದೇ ರೀತಿಯ ದಂಧೆ ನಡೆಸುತ್ತಿದ್ದಂತೆ ಮಾಹಿತಿ ಸಿಕ್ಕಿದೆ. “ಮಾಹಿತಿ ನೀಡಿಲ್ಲ, ಕ್ರಮ ಕೈಗೊಳ್ಳಬೇಕು” ಎಂಬ ಹೆಸರಿನಲ್ಲಿ ಅಧಿಕಾರಿಗಳಿಗೂ, ಸೊಸೈಟಿಗಳಿಗೊ ಬೆದರಿಕೆ ಹಾಕಿ ಹಣ ಕೀಳುವುದು ಇವರ ತಂತ್ರ.
ಕೆಲಸ ಇಲ್ಲದೇ ಮಾಹಿತಿ ಹಕ್ಕಿನ ಹೆಸರನ್ನೇ “ಬಿಸಿನೆಸ್” ಮಾಡಿಕೊಂಡು, ಹಲವು ವರ್ಷಗಳಿಂದ ಹಣ ಮಾಡುತ್ತಿದ್ದರೆಂಬ ಆರೋಪಗಳು ಕೇಳಿಬಂದಿವೆ. ಆರ್ಟಿಐ ಅಸ್ತ್ರದಿಂದ ದುಡ್ಡು ಪೀಕುವುದು, ಅಧಿಕಾರಿಗಳನ್ನು ಹೆದರಿಸುವುದು, ನಂತರ ಪಾರಿಯಾಗುವುದು – ಇವರ ರೂಢಿಯ ಮಾರ್ಗ!
ಹುಬ್ಬಳ್ಳಿ ಗೋಕಲ ಠಾಣೆಯ ಪೊಲೀಸರು ಸಿಕ್ಕ ಮಾಹಿತಿ ಆಧಾರದಲ್ಲಿ ಸೊಸೈಟಿಯವರೊಂದಿಗೆ ಕಾರ್ಯಾಚರಣೆ ರೂಪಿಸಿದ್ದರು. ಸೂಕ್ಷ್ಮವಾಗಿ ರಚಿಸಿದ ಬಲೆ ಬೀಸಿ, ಆರೋಪಿಗಳು ಹಣ ಸ್ವೀಕರಿಸಿದ ಕ್ಷಣದಲ್ಲೇ ಬಂಧನ ನಡೆಸಿ ‘ಆಪರೇಷನ್ ಆರ್ಟಿಐ ಮಾಫಿಯಾ’ ಯಶಸ್ವಿಗೊಳಿಸಿದರು.
ಬಂಧಿತರಿಂದ ವಶಪಡಿಸಿಕೊಂಡ ಮೊತ್ತ, ಮೊಬೈಲ್ಗಳು ಹಾಗೂ ದಾಖಲೆಗಳನ್ನು ಪೊಲೀಸರು ತನಿಖೆಗೆ ತೆಗೆದುಕೊಂಡಿದ್ದಾರೆ.
ಪೊಲೀಸರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು “ಮಾಹಿತಿ ಹಕ್ಕಿನ ಹೆಸರಿನಲ್ಲಿ ಬರುವ ಪ್ರತಿ ಅರ್ಜಿಯನ್ನು ಗಮನದಿಂದ ಪರಿಶೀಲಿಸಿ, ಹಣದ ಬೇಡಿಕೆ ಬಂದರೆ ತಕ್ಷಣ ದೂರು ನೀಡಬೇಕು” ಎಂದು ಹೇಳಿದ್ದಾರೆ.
ಈ ಘಟನೆ ಮಾಹಿತಿ ಹಕ್ಕಿನ ನೈಜ ಉದ್ದೇಶವನ್ನು ದುರುಪಯೋಗಪಡಿಸಿಕೊಂಡು ‘ಮಾಹಿತಿ ಮಾಫಿಯಾ’ ರೂಪಿಸಿಕೊಂಡ ಕೆಲವರ ಕೃತ್ಯಕ್ಕೆ ಕಣ್ಣೀರು ತರಿಸಿದೆ.


