ಕರಾವಳಿ ವಾಯ್ಸ್ ನ್ಯೂಸ್

ಭಟ್ಕಳ: ಮಾರುಕಟ್ಟೆ ಬೆಲೆಯ ಅರ್ಧ ದರದಲ್ಲಿ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ಆಮಿಷ ನೀಡಿ ಗ್ರಾಹಕರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ ಬಳಿಕ ಗ್ಲೋಬಲ್ ಎಂಟರ್‌ಪ್ರೈಸಸ್ ಮಾಲಕರು ರಾತ್ರೋರಾತ್ರಿ ಪರಾರಿಯಾದ ಘಟನೆ ಭಟ್ಕಳದಲ್ಲಿ ಭಾರೀ ಸಂಚಲನ ಮೂಡಿಸಿದೆ.

ತಿಂಗಳ ಹಿಂದೆ ಭಟ್ಕಳ ಮಾರಿಕಟ್ಟೆ ಪ್ರದೇಶದಲ್ಲಿ ಬಾಡಿಗೆ ಕಟ್ಟಡದಲ್ಲಿ ಮಳಿಗೆಯನ್ನು ಆರಂಭಿಸಿದ್ದ ತಮಿಳುನಾಡು ಮೂಲದ ನಾಲ್ಕು-ಐದು ಮಂದಿ “ಗ್ಲೋಬಲ್ ಎಂಟರ್‌ಪ್ರೈಸಸ್” ಹೆಸರಿನಲ್ಲಿ ವ್ಯಾಪಾರ ಶುರುಮಾಡಿದ್ದರು. ಮಂಚ, ಫ್ರಿಡ್ಜ್, ವಾಷಿಂಗ್ ಮಷೀನ್, ಟೇಬಲ್, ಕುರ್ಚಿ, ಕುಕ್ಕರ್, ಮಿಕ್ಸಿ ಸೇರಿದಂತೆ ಹಲವು ವಸ್ತುಗಳನ್ನು ಮಾರುಕಟ್ಟೆ ದರಕ್ಕಿಂತ ಅರ್ಧ ಬೆಲೆಯಲ್ಲಿ ನೀಡುವುದಾಗಿ ಹೇಳಿ ಜನರ ನಂಬಿಕೆ ಗಳಿಸಿದ್ದರು.

ಹಣ ಪಾವತಿಸಿದ 10 ದಿನಗಳ ನಂತರ ಸರಕು ವಿತರಿಸುವ ಷರತ್ತು ಇಟ್ಟು, ಮೊದಲ ಕೆಲವು ವಾರಗಳಲ್ಲಿ ಕೆಲ ಗ್ರಾಹಕರಿಗೆ ಸರಕು ನೀಡುವ ಮೂಲಕ ಜನರನ್ನು ಆಕರ್ಷಿಸಿದ್ದರು. ಬಳಿಕ ನೂರಾರು ಜನರು ಆಮಿಷಕ್ಕೆ ಬಿದ್ದು ಲಕ್ಷಾಂತರ ರೂ. ಹೂಡಿಕೆ ಮಾಡಿದ್ದಾರೆ.

ಆದರೆ ಕಳೆದ ರಾತ್ರಿ ಮಾಲಕರು ಮಳಿಗೆಯ ಬಾಗಿಲಿಗೆ ಲಾಕ್ ಹಾಕಿ ಪರಾರಿಯಾದರು. ಬೆಳಿಗ್ಗೆ ಮಳಿಗೆ ಮುಚ್ಚಿರುವುದನ್ನು ಕಂಡ ಆಕ್ರೋಶಿತ ಗ್ರಾಹಕರು ಬಾಗಿಲು ಮುರಿದು ಒಳ ನುಗ್ಗಿ ಕೈಗೆ ಸಿಕ್ಕಿದ್ದನ್ನು ದೋಚಿದ ಘಟನೆ ನಡೆದಿದೆ.

ಜನರ ಆಕ್ರೋಶ ನಿಯಂತ್ರಿಸಲು ಸ್ಥಳಕ್ಕೆ ಧಾವಿಸಿದ ಪೊಲೀಸರು ಹರಸಾಹಸ ಪಟ್ಟು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.

ತಿಂಗಳ ಹಿಂದೆ ಈ ವಂಚನೆಯ ಕುರಿತು ಸ್ಥಳೀಯ ವ್ಯಾಪಾರಿಯೋರ್ವರು ಪೊಲೀಸರಿಗೆ ಶಂಕೆ ವ್ಯಕ್ತಪಡಿಸಿದ್ದರೂ, ಮಳಿಗೆಗೆ ಟಿನ್ ನಂಬರ್ ಇದ್ದ ಕಾರಣ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದೆ.

ಈಗ ಪೊಲೀಸ್ ನಿರ್ಲಕ್ಷ್ಯದ ವಿರುದ್ಧವೂ ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ದಿವಾಕರ್ ಹಾಗೂ ಎಸ್‌ಐ ತಿಮ್ಮಪ್ಪ ಸಿಬ್ಬಂದಿಯೊಡನೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಭಟ್ಕಳ ನಗರದಲ್ಲಿ ಮತ್ತೊಂದು ವಂಚನೆ ಕೇಸ್: ಜನರ ನಂಬಿಕೆಗೆ ಶಾಕ್!

 

Please Share: