ಹೊನ್ನಾವರ/ಅಂಕೋಲಾ: ಇಲ್ಲಿಯ ಉಪ ನೋಂದಣಾಧಿಕಾರಿ (ಸಬ್ ರಜಿಸ್ಟರ್) ಕಚೇರಿಗೆ ಕಾರವಾರದ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಸಂಜೆ ದಿಢೀರ್ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಲೋಕಾಯುಕ್ತ ಡಿ.ವಾಯ್.ಎಸ್.ಪಿ. ಧನ್ಯಾ ನಾಯಕ ಹಾಗೂ ಇನ್ಸ್‌ಪೆಕ್ಟರ್ ಇರುವ ತಂಡವೊಂದು ಸಂಜೆ 5 ಗಂಟೆಯ ಸುಮಾರಿಗೆ ಹೊನ್ನಾವರ ಕಚೇರಿಗೆ ಆಗಮಿಸಿ, ರಾತ್ರಿಯವರೆಗೂ ಪರಿಶೀಲನೆ ಮುಂದುವರಿಸಿದ್ದಾರೆ.
ಈ ಕಚೇರಿಯ ಕುರಿತು ಸಾರ್ವಜನಿಕ ವಲಯದಲ್ಲಿ ಹಲವು ದೂರುಗಳು ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ದಾಳಿ ನಡೆದಿರಬಹುದೆಂದು ಊಹಿಸಲಾಗಿದೆ. ಆದರೆ ಇದು ನಿರ್ದಿಷ್ಟ ದೂರಿನ ಹಿನ್ನೆಲೆಯಲ್ಲಿ ನಡೆದಿದೆಯೇ ಅಥವಾ ಸಾರ್ವಜನಿಕವಾಗಿ ಹರಿದಾಡುತ್ತಿದ್ದ ಅಸಮಾಧಾನಗಳ ಹಿನ್ನೆಲೆಯಲ್ಲಿ ನಡೆದಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಅದೇ ರೀತಿ, ಅಂಕೋಲಾದ ಉಪ ನೋಂದಣಾಧಿಕಾರಿ ಕಚೇರಿಗೂ ಸಂಜೆ 4.30ರ ಸುಮಾರಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟಿ ನೀಡಿ, ದಾಖಲೆ ಪರಿಶೀಲನೆ ನಡೆಸಿದ್ದು ರಾತ್ರಿಯವರೆಗೂ ಕಾರ್ಯ ಮುಂದುವರೆದಿದೆ ಎಂದು ಮಾಹಿತಿ ಲಭ್ಯವಾಗಿದೆ.


