ಕುಮಟಾ: ತಾಲೂಕಿನ ದೇವಗಿರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊರಭಾಗದಲ್ಲಿ, ಎರಡು ದಿನಗಳ ಹಿಂದೆ ಚಿರತೆ ಮರಿಯೊಂದು ಕಾಡುಹಂದಿ ಹಿಡಿಯಲು ಹಾಕಿದ ಉರುಳಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಸ್ಥಳೀಯರ ಹೇಳಿಕೆಯಿಂದ, ಕಳೆದ ಕೆಲವು ದಿನಗಳಿಂದ ಹೆಣ್ಣು ಚಿರತೆಯೊಂದು ತನ್ನ ಮರಿಯೊಂದಿಗೆ ಈ ಭಾಗದಲ್ಲಿ ಸಂಚರಿಸುತ್ತಿತ್ತು. ಇದೇ ಸಮಯದಲ್ಲಿ ಕಾಡುಹಂದಿಗಳಿಂದಾಗಿ ರೈತರ ಬೆಳೆ ಹಾನಿಯಾಗುತ್ತಿದ್ದ ಹಿನ್ನೆಲೆಯಲ್ಲಿ, ಕೆಲವರು ಅವುಗಳನ್ನು ಹಿಡಿಯಲು ಉರುಳು ಹಾಕಿದ್ದರು ಎನ್ನಲಾಗಿದೆ. ಆ ಉರುಳಿಗೇ ಚಿರತೆ ಮರಿ ಬಲಿಯಾಗಿರುವುದು ಖಚಿತವಾಗಿದೆ.

ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು, “ಚಿರತೆ ಮರಿ ಮುಳ್ಳಿನ ಬೇಲಿಯಲ್ಲಿ ಸಿಲುಕಿ ಮೃತಪಟ್ಟಿದೆ” ಎಂದು ಹೇಳಿಕೊಂಡಿದ್ದಾರೆ. ಆದರೆ ಸತ್ತ ಚಿರತೆಯ ದೇಹದಲ್ಲಿ ಮುಳ್ಳಿನಿಂದಾಗುವ ಗಾಯದ ಗುರುತುಗಳು ಗೋಚರಿಸದಿರುವುದರಿಂದ, ಇಲಾಖೆಯ ಹೇಳಿಕೆಗೆ ಸ್ಥಳೀಯರು ಪ್ರಶ್ನೆ ಎತ್ತಿದ್ದಾರೆ.

ಕಾನೂನು ಪ್ರಕಾರ ಕಾಡುಹಂದಿ ಹಿಡಿಯಲು ಉರುಳು ಹಾಕುವುದು ನಿಷೇಧಿತ. ಆದರೂ ಇಂತಹ ಅಕ್ರಮ ಉರುಳುಗಳನ್ನು ಹಾಕಲಾಗುತ್ತಿದ್ದು, ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. “ಇದರಿಂದ ಕಾಡುಪ್ರಾಣಿಗಳ ಸಾವಿಗೆ ಯಾರು ಜವಾಬ್ದಾರರು?” ಎಂಬ ಪ್ರಶ್ನೆ ಜನರ ನಡುವೆ ಗಟ್ಟಿಯಾಗಿ ಕೇಳಿಬರುತ್ತಿದೆ.

ಧಾರೇಶ್ವರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಹಾಗೂ ಮರಿಗಳ ಸಂಚರಣೆ ಇನ್ನೂ ಮುಂದುವರೆದಿದ್ದು, ಇದೇ ರೀತಿಯ ಘಟನೆಗಳು ಮರುಕಳಿಸದಂತೆ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಘಟನೆಗೆ ಸಂಬಂಧಿಸಿದ ಚಿರತೆ ಮರಿ ಉರುಳಿಗೆ ಸಿಲುಕಿರುವ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Please Share: