ಶಿರಸಿ: ತಾಲ್ಲೂಕಿನ ಗೌಡಳ್ಳಿ ಹತ್ತಿರದ ಖಾನನಗರದ ರಸ್ತೆ ಬದಿಯಲ್ಲಿ ಭಾನುವಾರ ಬೆಳಿಗ್ಗೆ ಚಿರತೆ ಮರಿ ಪ್ರತ್ಯಕ್ಷವಾದ ಘಟನೆ ಸ್ಥಳೀಯರಲ್ಲಿ ಅಪಾರ ಕುತೂಹಲ ಮೂಡಿಸಿದೆ.

ಸಾಮಾನ್ಯವಾಗಿ ಕಾಡಿನಲ್ಲಿ ಮಾತ್ರ ಕಾಣಿಸಿಕೊಳ್ಳುವ ಚಿರತೆ ಮರಿ ಅಚಾನಕ್ ರಸ್ತೆ ಬದಿಯಲ್ಲಿ ನಿಂತಿರುವುದನ್ನು ಕಂಡು ವಾಹನ ಸವಾರರು ಮತ್ತು ಪಾದಚಾರಿಗಳು ನಿಲ್ಲಿ ಆ ದೃಶ್ಯವನ್ನು ಕಣ್ತುಂಬಿಕೊಂಡರು. ಕೆಲವರು ಪ್ರೀತಿಯಿಂದ ಮರಿಯತ್ತ ಕೈ ಚಾಚಿ ಮುಟ್ಟಿ ನೋಡುತ್ತ, ಮೊಬೈಲ್‌ಗಳಲ್ಲಿ ಫೋಟೋ ಹಾಗೂ ವೀಡಿಯೋಗಳನ್ನು ಕ್ಲಿಕ್ಕಿಸುತ್ತಿರುವುದು ಕಂಡುಬಂತು.

ಈ ಘಟನೆ ತಿಳಿದ ತಕ್ಷಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಅವರ ನೇತೃತ್ವದಲ್ಲಿ, ವಲಯ ಅರಣ್ಯಾಧಿಕಾರಿ ಗಿರೀಶ ನಾಯ್ಕ ಅವರ ಮಾರ್ಗದರ್ಶನದಲ್ಲಿ ಸಿಬ್ವಂದಿಯ ತಂಡ ಸ್ಥಳಕ್ಕೆ ತೆರಳಿ ಚಿರತೆ ಮರಿ ರಕ್ಷಣೆ ಕಾರ್ಯಚರಣೆ ನಡೆಸಿದೆ. ಚಿರತೆ ಮರಿಯನ್ನು ಸುರಕ್ಷಿತವಾಗಿ ತಾಯಿ ಮಡಿಲಿಗೆ ಸೇರಿಸಿ, ನಂತರ ಕಾಡಿಗೆ ಬಿಡುಗಡೆ ಮಾಡಲಾಗಿದೆ.

ಸ್ಥಳೀಯರು “ಇಷ್ಟು ಹತ್ತಿರದಲ್ಲಿ ಚಿರತೆ ಮರಿ ಕಾಣುವುದು ವಿರಳ ಘಟನೆ. ನಾವೆಲ್ಲ ಮೊದಲು ಭಯಪಟ್ಟರೂ ನಂತರ ಅದು ತುಂಬಾ ಮುದ್ದಾಗಿದ್ದರಿಂದ ಪೋಟೊ ತೆಗೆದ್ಕೊಂಡ್ವಿ!” ಎಂದು ಹೇಳಿ ತಮ್ಮ ಕುತೂಹಲ ಹಂಚಿಕೊಂಡರು.

 

 

 

Please Share: