ಕಾರವಾರ: ತಾಲೂಕಿನ ಬಿಣಗಾದ ರಾಮನಗರದಲ್ಲಿ ಮನೆಯೊಂದರ ಕೂಗಳತೆಯ ದೂರದಲ್ಲಿಯೇ ಚಿರತೆ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಭಯ ಭೀತಿಗೊಂಡಿದ್ದಾರೆ.
ಕಳೆದ 15 ದಿನಗಳಿಂದ ರಾಮನಗರ ಪ್ರದೇಶದಲ್ಲಿ ಚಿರತೆ ಸುತ್ತಾಡುತ್ತಿರುವುದು ಗ್ರಾಮಸ್ಥರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿದೆ.
ಸ್ಥಳೀಯರ ಪ್ರಕಾರ, ಚಿರತೆ ಮನೆಗಳ ಹತ್ತಿರಕ್ಕೂ ಬಂದಿರುವ ಘಟನೆಗಳು ನಡೆದಿದ್ದು, ಮಕ್ಕಳೂ ಸೇರಿದಂತೆ ಗ್ರಾಮಸ್ಥರು ರಾತ್ರಿ ಹೊತ್ತು ಹೊರಗೆ ಹೋಗಲು ಹೆದರುತ್ತಿದ್ದಾರೆ.
ಈ ಹಿಂದೆ ಅಮದಳ್ಳಿ ಬಳಿ ಬಂಡೆಗಲ್ಲಿನ ಮೇಲೆ ಚಿರತೆ ಕಾಣಿಸಿಕೊಂಡಿದ್ದು, ಇದೀಗ ರಾಮನಗರ ಪ್ರದೇಶದಲ್ಲಿ ಹಾವಳಿ ಹೆಚ್ಚಿರುವುದು ಗ್ರಾಮಸ್ಥರ ನಿದ್ದೆಗೆಡಿಸಿದೆ. ಆದರೂ ಈವರೆಗೆ ಅರಣ್ಯ ಇಲಾಖೆಯು ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಾಡಿನಿಂದ ಊರಿಗೆ ಬರುತ್ತಿರುವ ಚಿರತೆಯಿಂದ ಮಾನವ-ಕಾಡುಜೀವಿ ಸಂಘರ್ಷ ಭೀತಿ ಹೆಚ್ಚಾಗಿರುವುದರಿಂದ, ತುರ್ತು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಆಗ್ರಹ ವ್ಯಕ್ತಪಡಿಸಿದ್ದಾರೆ.


