ಕರಾವಳಿ ವಾಯ್ಸ್ ನ್ಯೂಸ್
ಕುಮಟಾ: ತಾಲ್ಲೂಕಿನ ಮಾನೀರ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್ಆರ್ ಟಿಸಿ ಬಸ್ ಹಾಗೂ ಬುಲೋರಾ ಪಿಕ್‌ಅಪ್ ವಾಹನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಸಿತು. ಗುರುವಾರ ಈ ಅಪಘಾತ ಸಂಭವಿಸಿದ್ದು, ಡಿಕ್ಕಿಯ ತೀವ್ರತೆಗೆ ಪಿಕ್‌ಅಪ್ ವಾಹನದ ಚಾಲಕನಿಗೆ ಗಂಭೀರ ಗಾಯಗಳಾಗಿವೆ.
ಅಪಘಾತದ ವೇಳೆ KSRTC ಬಸ್ ವೇಗವಾಗಿ ಸಾಗುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಪಿಕ್‌ಅಪ್ ವಾಹನದೊಂದಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ಪರಿಣಾಮ ಪಿಕ್‌ಅಪ್ ವಾಹನದ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಚಾಲಕ ವಾಹನದೊಳಗೆ ಸಿಲುಕಿಕೊಂಡಿದ್ದಾನೆ. ಸ್ಥಳೀಯರ ಸಹಕಾರದಿಂದ ಗಾಯಾಳುವನ್ನು ಹೊರತೆಗೆದು ತಕ್ಷಣ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ಪರಿಣಾಮ KSRTC ಬಸ್‌ನ ಮುಂಭಾಗವೂ ಗಂಭೀರವಾಗಿ ಹಾನಿಗೊಳಗಾಗಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರು ಭಾರೀ ಆತಂಕಕ್ಕೆ ಒಳಗಾದರು. ಅದೃಷ್ಟವಶಾತ್ ಬಸ್‌ನ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಹೆದ್ದಾರಿಯ ಎರಡೂ ದಿಕ್ಕುಗಳಲ್ಲಿ ಉದ್ದವಾದ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಚಾಲಕರು ಹಾಗೂ ಪ್ರಯಾಣಿಕರು ಪರದಾಡುವಂತಾಯಿತು.
ಸುದ್ದಿ ತಿಳಿದ ತಕ್ಷಣ ಕುಮಟಾ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಎರಡು ಕ್ರೇನ್‌ಗಳ ಸಹಾಯದಿಂದ ಅಪಘಾತಗೊಂಡ ವಾಹನಗಳನ್ನು ತೆರವುಗೊಳಿಸಿದರು. ನಂತರ ರಸ್ತೆ ಸ್ವಚ್ಛಗೊಳಿಸಿ ಸಂಚಾರವನ್ನು ಹಂತ ಹಂತವಾಗಿ ಪುನಃ ಆರಂಭಿಸಲಾಯಿತು.
ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ವೇಗದ ಅತಿರೇಕ, ಅಜಾಗರೂಕ ಚಾಲನೆ ಅಥವಾ ರಸ್ತೆ ಪರಿಸ್ಥಿತಿ ಕಾರಣವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
