ವಡೋದರಾ (ಗುಜರಾತ್): ನವರಾತ್ರಿ ಸಂಭ್ರಮದ ಗರ್ಬಾ ಪೆಂಡಾಲ್‌ನಲ್ಲಿ ನಡೆದ ಅಸಾಧಾರಣ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ದಂಪತಿ ಗರ್ಬಾ ವೇಳೆ ಸಾರ್ವಜನಿಕವಾಗಿ ಚುಂಬಿಸಿರುವ ವೀಡಿಯೊ ವೈರಲ್ ಆಗಿದ್ದು, “ಅಸಹ್ಯ ವರ್ತನೆ” ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ವೀಡಿಯೊದಲ್ಲಿ ಜೋಡಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಭಕ್ತರು ಸಂಭ್ರಮಿಸುತ್ತಿರುವ ಸಮಯದಲ್ಲೇ ಚುಂಬಿಸಿದ ದೃಶ್ಯ ಕಂಡುಬಂದಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು “ಅಶ್ಲೀಲ ವರ್ತನೆ” ಎಂದು ಕಟು ಟೀಕಿಸಿ, ನವರಾತ್ರಿ ಹಬ್ಬದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪಾವಿತ್ರ್ಯಕ್ಕೆ ಧಕ್ಕೆ ತಂದಿದ್ದಾರೆಂದು ಕಿಡಿಕಾರಿದ್ದಾರೆ.
ವಿವಾದ ಹೆಚ್ಚಿದ ಹಿನ್ನೆಲೆಯಲ್ಲಿ, ಆ ದಂಪತಿ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಕ್ಷಮಾಪಣೆ ಪತ್ರ ಬರೆದಿದ್ದಾರೆ. ಬಳಿಕ ಅವರು ಆಸ್ಟ್ರೇಲಿಯಾಕ್ಕೆ ಹಿಂತಿರುಗಿದ್ದಾರೆ ಎನ್ನಲಾಗಿದೆ.


