ಕಾರವಾರ: ಯಾವುದೇ ಅಧಿಕೃತ ಪರವಾನಿಗೆ ಇಲ್ಲದೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಕಾರವಾರ ತಾಲೂಕಿನ ಎರಡು ನಕಲಿ ಕ್ಲಿನಿಕ್‌ಗಳ ವಿರುದ್ಧ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬೀಗ ಹಾಕಿದ ಘಟನೆ ಬೆಳಕಿಗೆ ಬಂದಿದೆ.
ಸೆಪ್ಟೆಂಬರ್ 10ರಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನೀರಜ ಬಿ.ವಿ. ಅವರ ನೇತೃತ್ವದ ತಂಡ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದೆ. ಕಾರವಾರ ನಗರದ ಕೆಇಬಿ ರಸ್ತೆಯಲ್ಲಿದ್ದ ಎಸ್. ಕುಮಾರ ಮಂಡಲ್ ಅವರ ಅನಧಿಕೃತ ಕ್ಲಿನಿಕ್‌ನ್ನು ಮುಚ್ಚುವಂತೆ ಸೂಚಿಸಿ ನೋಟಿಸ್ ನೀಡಲಾಗಿದೆ. ಅದೇ ರೀತಿ ಐಸ್ ಪ್ಯಾಕ್ಟ್ರಿ, ಚೆಂಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಜೇಶ್ ಗುಣಾ ಹಳದನಕರ್ ಅವರ ಅನಧಿಕೃತ ಕ್ಲಿನಿಕ್ ಮೇಲೂ ದಾಳಿ ನಡೆಸಿ ಬೀಗ ಹಾಕಲಾಗಿದೆ.
ಅಧಿಕಾರಿಗಳ ಪ್ರಕಾರ, ನಕಲಿ ಕ್ಲಿನಿಕ್ ಪತ್ತೆಯಾದಾಗ ಮೊದಲಿಗೆ ಮಾಲೀಕರಿಗೆ ನೋಟಿಸ್ ನೀಡಿ ಎಚ್ಚರಿಕೆ ನೀಡಲಾಗುತ್ತದೆ. ನಂತರ ಮುಚ್ಚಳಿಕೆ ಪತ್ರ ಪಡೆದು ಆಸ್ಪತ್ರೆ ಮುಚ್ಚುವ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ನಿಯಮ ಮೀರಿ ಪುನಃ ಕಾರ್ಯಾಚರಣೆ ಮಾಡಿದರೆ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಪ್ರಕರಣ ದಾಖಲಿಸುವುದಾಗಿ ಆರೋಗ್ಯ ಇಲಾಖೆ ಎಚ್ಚರಿಸಿದೆ.
ಇದೇ ರೀತಿಯಲ್ಲಿ, ಮುಚ್ಚಳಿಕೆ ನಿಯಮ ಉಲ್ಲಂಘಿಸಿ ಕಾತೂರ ಗ್ರಾಮದ ರತ್ನಮ್ಮ ಅವರು ಆಸ್ಪತ್ರೆ ನಡೆಸಿದ ಪ್ರಕರಣವನ್ನು ಇತ್ತೀಚೆಗೆ ಡಿಸಿ ಕೋರ್ಟ್‌ಗೆ ದಾಖಲಿಸಲಾಗಿತ್ತು.


