ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ನಗರದ ರವೀಂದ್ರನಾಥ ಠಾಗೂರ್ ಕಡಲತೀರದಲ್ಲಿ ಡಿಸೆಂಬರ್ 22 ರಿಂದ 28 ರ ವರೆಗೆ 7 ದಿನಗಳ ಕಾಲ ಕರಾವಳಿ ಉತ್ಸವ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಅಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.
ಡಿಸೆಂಬರ್ 22 ರಂದು ಮಾನ್ಯ ಮುಖ್ಯಮಂತ್ರಿಗಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ರಾಜ್ಯದ ಉಪ ಮುಖ್ಯಮಂತ್ರಿಗಳು, ಕಂದಾಯ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯದ ವಿವಿಧ ಇಲಾಖೆಗಳ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಎಲ್ಲಾ ಜನಪ್ರತಿನಿಧಿಗಳು ಹಾಗೂ ರಾಜ್ಯದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಡಿಸೇಂಬರ್ 22 ರಂದು ಮಾನ್ಯ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ನೂತನ ಕಚೇರಿ ಕಟ್ಟಡ, ಕ್ರಿಮ್ಸ್ ಆಸ್ಪತ್ರೆ ಕಟ್ಟಡ, ಮಂಜುಗುಣಿ ಸೇತುವೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯನ್ನು ನಡೆಸಲಿದ್ದಾರೆ.
ಕರಾವಳಿ ಉತ್ಸವದಲ್ಲಿ ಪ್ರತಿ ದಿನ ಸಂಜೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಲಾವಿದರರಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಈ ಕಾರ್ಯಕ್ರಮಕ್ಕೂ ಮುನ್ನ ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಬೆಳಗಿನ ಅವಧಿಯಲ್ಲಿ ರಂಗೋಲಿ ಸ್ಪರ್ಧೇ, ಮ್ಯಾರಾಥಾನ್, ಅಡುಗೆ ಸ್ಪರ್ಧೆ, ಶ್ವಾನ ಪ್ರದರ್ಶನ, ಗಾಳಿಪಟ ಉತ್ಸವ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದ್ದು, ಈ ಎಲ್ಲಾ ಕಾರ್ಯಕ್ರಮಗಳ ಕುರಿತ ಸಂಪೂರ್ಣ ವಿವರಗಳನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

