ಕರಾವಳಿ ವಾಯ್ಸ್ ನ್ಯೂಸ್
ಗೋವಾ: ರಾಜ್ಯದ ಕಾಣಕೋಣ ಬೀಚ್‌ನಲ್ಲಿ ಹಾರಿರುವ ಕೆಂಪು-ಹಳದಿ ಬಣ್ಣದ ಬಾವುಟವನ್ನು ನೋಡಿ ಪ್ರವಾಸಿಗರು ಕ್ಷಣಕ್ಕೊಂದು ಗೊಂದಲಕ್ಕೀಡಾದ ಘಟನೆ ಕುತೂಹಲಕ್ಕೆ ಕಾರಣವಾಗಿದೆ.
ಗೋವಾ ರಾಜ್ಯದಲ್ಲಿ ಪದೇ ಪದೇ ಕನ್ನಡಿಗರ ವಿರುದ್ಧದ ಘಟನೆಗಳು ವರದಿಯಾಗುತ್ತಿರುವ ಹಿನ್ನಲೆಯಲ್ಲಿ, ಕಡಲತೀರದಲ್ಲಿ ಇಂತಹ ಬಾವುಟ ಕಂಡು ಕೆಲ ಕನ್ನಡಿಗರು “ಗೋವದಲ್ಲೇ ಈಗ ಕನ್ನಡ ಬಾವುಟ ಹಾರಿಸುತ್ತಾರೆಯೇ?” ಎಂದು ಅಚ್ಚರಿ ಪಟ್ಟು ನೋಡಿದರು.
ಆದರೆ ಕೆಲ ಕ್ಷಣಗಳಲ್ಲೇ ನಿಜ ಬಹಿರಂಗವಾಯಿತು.
ಕಡಲ ತೀರದಲ್ಲಿ ಹಾರಿಸಲಾಗಿದ್ದ ಈ ಬಾವುಟದಲ್ಲಿ ಕೆಂಪು ಬಣ್ಣ ಮೇಲ್ಭಾಗದಲ್ಲಿ, ಹಳದಿ ಬಣ್ಣ ಕೆಳಭಾಗದಲ್ಲಿ ಇತ್ತು. ಆದರೆ ಕನ್ನಡ ಬಾವುಟದಲ್ಲಿ ಹಳದಿ ಮೇಲೆ, ಕೆಂಪು ಕೆಳಗೆ ಇರುತ್ತದೆ. ಈ ಸಣ್ಣ ವ್ಯತ್ಯಾಸವೇ ಗೊಂದಲಕ್ಕೆ ಕಾರಣವಾಯಿತು.
ಮಾಹಿತಿ ಪ್ರಕಾರ, ಇದು ಪ್ರವಾಸಿಗರ ಸುರಕ್ಷತೆಗೆ ಎಚ್ಚರಿಕೆಯ ಸಂಕೇತ ಬಾವುಟ — ಸಮುದ್ರ ಪ್ರಕ್ಷುಭ್ದ ಸ್ಥಿತಿಯಲ್ಲಿ ರೆಡ್ ಅಲರ್ಟ್ ಸೂಚಿಸಲು ಕಡಲತೀರದಲ್ಲಿ ಹಾರಿಸಲಾಗಿದೆ. ಹೀಗಾಗಿ ಇದು ಕನ್ನಡ ಬಾವುಟವಲ್ಲ, ಆದರೆ ಎಚ್ಚರಿಕೆಯ ಸೂಚನೆ ಎಂಬುದು ಸ್ಪಷ್ಟವಾಗಿದೆ.
ಗೋವಾದಲ್ಲಿ ಕನ್ನಡಿಗರು ಕ್ಷಣಕ್ಕೊಂದು “ಇದು ನಮ್ಮ ಬಾವುಟವೇ?” ಎಂದು ಯೋಚಿಸಿದರೂ, ನಿಜ ತಿಳಿದು ಎಲ್ಲರೂ ಹಾಸ್ಯದಲ್ಲೇ ತೇಲಿದರು.


