ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಫೆ.22ರಂದು ಮುಖ್ಯಮಂತ್ರಿ ಜಿಲ್ಲೆಗೆ ಆಗಮಿಸಲಿರುವ ಹಿನ್ನಲೆಯಲ್ಲಿ ಸಿದ್ಧತೆಗಳು ಜೋರಾಗಿರುವ ನಡುವೆ, ನಗರದ ಕಾರವಾರ ಜಿಲ್ಲಾಸ್ಪತ್ರೆ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ 1.30ರ ಸುಮಾರಿಗೆ ಅಚ್ಚರಿಯ ಘಟನೆ ನಡೆದಿದೆ. ನೂತನ ಕಟ್ಟಡದ ಬಳಕೆಗಾಗಿ ಸಿದ್ಧವಾಗುತ್ತಿರುವ ಎಸ್‌ಟಿಪಿ (ಮಲಿನಜಲ ಶುದ್ಧೀಕರಣ ಘಟಕ) ಬೃಹತ್ ಹೊಂಡದಲ್ಲಿ ಕೋಣವೊಂದು ಆಯತಪ್ಪಿ ಬಿದ್ದಿದ್ದು, ಅದನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ‘ಕಂಬಳ’ದಂತೆ ಕಂಡುಬಂದಿತು.
ತೆರೆದ ಸ್ಥಿತಿಯಲ್ಲಿದ್ದ ಎಸ್‌ಟಿಪಿ ಹೊಂಡದಲ್ಲಿ ಬಿದ್ದ ಕೋಣ ಮೇಲೇರಲಾಗದೆ ಹರಸಾಹಸ ಪಡುತ್ತಿದ್ದ ದೃಶ್ಯ ಆಸ್ಪತ್ರೆ ಆವರಣದಲ್ಲಿ ಕೆಲಕಾಲ ಕುತೂಹಲಕ್ಕೆ ಕಾರಣವಾಯಿತು. ವಿಷಯ ತಿಳಿದ ಆಸ್ಪತ್ರೆ ಸಿಬ್ಬಂದಿ ಸಾಮಾಜಿಕ ಕಾರ್ಯಕರ್ತ ಮಾಧವ ನಾಯಕ ಅವರಿಗೆ ಮಾಹಿತಿ ನೀಡಿದರು. ಅವರು ಕೂಡಲೇ ಅಗ್ನಿಶಾಮಕ ಇಲಾಖೆ ಹಾಗೂ ನಗರಸಭೆಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಕೋಣವನ್ನು ಮೇಲಕ್ಕೆತ್ತಲು ಹರಸಾಹಸ ಪಟ್ಟರು. ಮೊದಲಿಗೆ ಹೊಂಡದಲ್ಲಿ ಮಣ್ಣು ತುಂಬಿಸಿ ಕೋಣ ಮೇಲೇರಲು ಅನುಕೂಲ ಮಾಡುವ ಪ್ರಯತ್ನ ನಡೆಯಿತು. ಬಳಿಕ ನಗರಸಭೆಯ ಜೆಸಿಬಿ ಯಂತ್ರದ ಸಹಾಯದಿಂದ ಕೋಣ ಹತ್ತಲು ದಾರಿ ಮಾಡಿಕೊಡಲಾಯಿತು.
ಸುಮಾರು ತಾಸಿಗೂ ಹೆಚ್ಚು ಕಾಲ ನಡೆದ ಕಾರ್ಯಾಚರಣೆಯ ಬಳಿಕ ಕೋಣವನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು. ಇದೇ ಹೊಂಡದಲ್ಲಿ ಜಾನುವಾರು ಬಿದ್ದಿರುವುದು ಎರಡನೇ ಘಟನೆ ಎನ್ನಲಾಗಿದೆ. ಕಾಮಗಾರಿ ಪ್ರಗತಿಯಲ್ಲಿರುವ ಎಸ್‌ಟಿಪಿ ಪ್ರದೇಶದಲ್ಲಿ ಸೂಕ್ತ ಸುರಕ್ಷತಾ ಕ್ರಮಗಳ ಕೊರತೆ ಬಗ್ಗೆ ಸಾರ್ವಜನಿಕರು ಪ್ರಶ್ನೆ ಎತ್ತಿದ್ದಾರೆ.
ಸಿಎಂ ಭೇಟಿ ಮುನ್ನ ಆಸ್ಪತ್ರೆ ಆವರಣದಲ್ಲಿ ‘ಕಂಬಳ’ದಂತಾದ ಈ ಘಟನೆ ಸ್ಥಳೀಯರ ನಡುವೆ ಚರ್ಚೆಗೆ ಗ್ರಾಸವಾಗಿದೆ.
