ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಕಾಳಿ ನದಿಯ ಮೇಲೆ ನಿರ್ಮಾಣವಾಗಲಿರುವ ನೂತನ ಸೇತುವೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಡಿಗಲ್ಲು ಹಾಕಿದ ಹಿನ್ನೆಲೆಯಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಕಾಳಿ ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದ ಸಂಸದ ಕಾಗೇರಿ, ಬಿಜೆಪಿ ನಾಯಕರು ಹಾಗೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರ ಜೊತೆ ಸಾಂಕೇತಿಕವಾಗಿ ಅಡಿಗಲ್ಲು ಹಾಕಿದರು. ಈ ವೇಳೆ ಕಾಗೇರಿ “ಇದು ಪ್ರೋಟೋಕಾಲ್ ಕಾರ್ಯಕ್ರಮವಲ್ಲ, ಕೇಂದ್ರ ಸರ್ಕಾರದ ಅನುದಾನದಲ್ಲಿ ಸೇತುವೆ ನಿರ್ಮಾಣವಾಗುತ್ತಿದೆ” ಎಂದರು.
ಆದರೆ, ಸ್ಥಳಕ್ಕೆ ತಡವಾಗಿ ಆಗಮಿಸಿದ ಶಾಸಕ ಸತೀಶ್ ಸೈಲ್ ಅಧಿಕಾರಿಗಳ ಮೇಲೂ ಗುತ್ತಿಗೆದಾರರ ಮೇಲೂ ಕಿಡಿಕಾರಿದರು. “ಪ್ರೋಟೋಕಾಲ್ ಕಾರ್ಯಕ್ರಮವಲ್ಲ ಅಂದರೆ ಅಡಿಗಲ್ಲು ಯಾಕೆ ಹಾಕಿದ್ದೀರಿ? ಸಿಎಂ, ಡಿಸಿಎಂ, ಸ್ಥಳೀಯ ಶಾಸಕನನ್ನ ಕರೆಯದೇ ಹೇಗೆ ಕಾರ್ಯಕ್ರಮ ನಡೆಸಿದ್ದೀರಿ?” ಎಂದು ಪ್ರಶ್ನಿಸಿದ ಅವರು ಐಆರ್‌ಬಿ ಅಧಿಕಾರಿಗಳು ಹಾಗೂ ಸೇತುವೆ ನಿರ್ಮಾಣ ಕಂಪನಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
“ಸೇತುವೆ ಬಿದ್ದಾಗ, ಶಿರೂರಿನಲ್ಲಿ ಗುಡ್ಡ ಕುಸಿದಾಗ ನಾವು ಸಹಾಯಕ್ಕೆ ಧಾವಿಸಿದ್ದೇವೆ. ಆಗ ಇವರು ಎಲ್ಲಿದ್ದರು? ಜನಪ್ರತಿನಿಧಿಗಳನ್ನು ನಿರ್ಲಕ್ಷ ಮಾಡುವ ಈ ರೀತಿಯ ನಡವಳಿಕೆ ಸರಿಯಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕ ಸೈಲ್, “ಅಡಿಗಲ್ಲು ಹಾಕಿದ್ದೀರಾ? ಅದನ್ನೇ ತೆಗೆದು ಬಿಸಾಕಲಿ!” ಎಂದು ಮಾಧ್ಯಮದವರ ಸಮ್ಮುಖದಲ್ಲೇ ತೀವ್ರವಾಗಿ ಪ್ರತಿಕ್ರಿಯಿಸಿದರು.


