ಹೊಸದಿಲ್ಲಿ: ದೇಶದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಬುಧವಾರ (ಅಕ್ಟೋಬರ್ 8)ರಿಂದ ಮಹತ್ವದ ಬದಲಾವಣೆ ಜಾರಿಯಾಗುತ್ತಿದೆ. ಈಗಿನಿಂದ ಬಳಕೆದಾರರು ಯುಪಿಐ (UPI) ಪಾವತಿಯನ್ನು ಮುಖ ಗುರುತು ಅಥವಾ ಬೆರಳಚ್ಚು ದೃಢೀಕರಣದ ಮೂಲಕ ಮಾಡಬಹುದು.

ಈ ಹೊಸ ಸೌಲಭ್ಯದಿಂದ ಪಾವತಿಗೆ ಪಿನ್ ನಮೂದಿಸುವ ಅವಶ್ಯಕತೆ ಇಲ್ಲ. ಈ ದೃಢೀಕರಣ ವಿಧಾನವನ್ನು ಆಧಾರ್ ಆಧಾರಿತ ಬಯೋಮೆಟ್ರಿಕ್ ಮಾಹಿತಿಯನ್ನು ಬಳಸಿಕೊಂಡು ಸಕ್ರಿಯಗೊಳಿಸಲಾಗಿದೆ. ಬಳಕೆದಾರರು ತಮ್ಮ ಮುಖವನ್ನು ಅಥವಾ ಬೆರಳಚ್ಚನ್ನು ದೃಢೀಕರಿಸಿದ ತಕ್ಷಣ ವಹಿವಾಟು ಪೂರ್ಣಗೊಳ್ಳುತ್ತದೆ.

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (NPCI)ಯ ಮಾಹಿತಿ ಪ್ರಕಾರ, ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿ 19.63 ಶತಕೋಟಿ ಯುಪಿಐ ವಹಿವಾಟುಗಳು ನಡೆದಿದ್ದು, ಆಗಸ್ಟ್‌ನ 20.01 ಶತಕೋಟಿ ವಹಿವಾಟಿಗೆ ಹೋಲಿಸಿದರೆ ಸ್ವಲ್ಪ ಇಳಿಕೆಯಾಗಿದೆ. ಆದರೆ ವಹಿವಾಟು ಮೌಲ್ಯದಲ್ಲಿ ಏರಿಕೆ ದಾಖಲಾಗಿದ್ದು, ಆಗಸ್ಟ್‌ನಲ್ಲಿ 24.85 ಲಕ್ಷ ಕೋಟಿ ರೂ. ಇದ್ದ ಮೌಲ್ಯ ಸೆಪ್ಟೆಂಬರ್‌ನಲ್ಲಿ 24.90 ಲಕ್ಷ ಕೋಟಿ ರೂ. ತಲುಪಿದೆ. ಪ್ರತಿ ದಿನ ಭಾರತದಲ್ಲಿ ಸರಾಸರಿ 82,991 ಕೋಟಿ ರೂ. ಯುಪಿಐ ಮೂಲಕ ಪಾವತಿಯಾಗುತ್ತಿದೆ.

 

Please Share: