ಕರಾವಳಿ ವಾಯ್ಸ್ ನ್ಯೂಸ್

ಕಾರವಾರ: ಉತ್ತರ ಕನ್ನಡ ಸಂಸದ ಹಾಗೂ ಮಾಜಿ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತೆ ತಮ್ಮ ಹೇಳಿಕೆಯಿಂದ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ.

ಹೊನ್ನಾವರದಲ್ಲಿ ನಡೆದ ರಾಷ್ಟ್ರೀಯ ಏಕತಾ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಗೇರಿ, “ನಾವು ಹಾಡುವ ರಾಷ್ಟ್ರಗೀತೆ ‘ಜನಗಣಮನ’ ಮೂಲದಲ್ಲಿ ಬ್ರಿಟಿಷರ ಸ್ವಾಗತ ಗೀತೆಯಾಗಿ ಬರೆಯಲ್ಪಟ್ಟಿತ್ತು” ಎಂದು ವಿವಾದಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಮುಂದುವರಿದು, “ಜನಗಣಮನ ಗೀತೆಗೆ ಸರಿಸಮಾನವಾಗಿ ವಂದೇ ಮಾತರಂ ಗೀತೆಗೆ ಪ್ರಾಮುಖ್ಯತೆ ಇದೆ. ನಿಜವಾದ ರಾಷ್ಟ್ರಗೀತೆ ವಂದೇ ಮಾತರಂ ಆಗಬೇಕಾಗಿತ್ತು. ಆದರೆ ನಮ್ಮ ಪೂರ್ವಜರು ಎರಡೂ ಇರಲಿ ಎಂದರು. ಈಗ ಮತ್ತೆ ಇತಿಹಾಸ ಕೆದಕುವ ಉದ್ದೇಶವಿಲ್ಲ, ಆದರೆ ಬಹಳ ಜನರಿಗೆ ಗೊತ್ತಿದೆ ಜನಗಣಮನ ಮೊದಲು ಬ್ರಿಟಿಷರ ಸ್ವಾಗತ ಗೀತೆ ಆಗಿತ್ತು” ಎಂದು ಹೇಳಿದರು.

ಅವರು ಇನ್ನೂ ಹೇಳಿದರು, “ವಂದೇ ಮಾತರಂ ಗೀತೆ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದೆ. RSS ಶತಮಾನೋತ್ಸವದ ಪ್ರಯುಕ್ತ ‘ವಂದೇ ಭಾರತ’ ಭಾವನೆ ಮತ್ತೆ ಎಲ್ಲೆಡೆ ಪಸರಿಸಬೇಕು” ಎಂದರು.

ಕಾಗೇರಿಯವರ ಈ ಹೇಳಿಕೆ ರಾಷ್ಟ್ರಗೀತೆಯ ಗೌರವ ಹಾಗೂ ಅದರ ಇತಿಹಾಸದ ಕುರಿತಂತೆ ಹೊಸ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಹೇಳಿಕೆಯ ವಿಡಿಯೋ ವೇಗವಾಗಿ ಹರಿದಾಡುತ್ತಿದ್ದು, “ಮಾಜಿ ಸ್ಪೀಕರ್ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರಾ?” ಎಂಬ ಪ್ರಶ್ನೆ ಸಾಮಾಜಿಕ ಮತ್ತು ರಾಜಕೀಯ ವಲಯಗಳಲ್ಲಿ ಎದ್ದಿದೆ.

Please Share: