ಕರಾವಳಿ ವಾಯ್ಸ್ ನ್ಯೂಸ್
ದಾಂಡೇಲಿ: ನಗರದಲ್ಲಿ ಕಾಡುಪ್ರಾಣಿಗಳ ಸಂರಕ್ಷಣೆಗೆ ಧಕ್ಕೆ ತರುವ ಅಕ್ರಮ ಚಟುವಟಿಕೆಗಳ ವಿರುದ್ಧ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ದ್ವಿಚಕ್ರ ವಾಹನದ ಮೂಲಕ ಕಾಡುಪ್ರಾಣಿಯ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಾಂಸ ಹಾಗೂ ವಾಹನ ಸಹಿತವಾಗಿ ಬಂಧಿಸಿರುವ ಘಟನೆ ನಗರದ ಬರ್ಚಿ ರಸ್ತೆಯಲ್ಲಿ ನಡೆದಿದೆ.
ನಗರದ ಗ್ರಾಮೀಣ ಪೊಲೀಸ್ ವಸತಿ ಗೃಹದ ಸಮೀಪದ ಬರ್ಚಿ ರಸ್ತೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿಯಮಿತ ಗಸ್ತು ಹಾಗೂ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ, ಅನುಮಾನಾಸ್ಪದವಾಗಿ ಸಾಗುತ್ತಿದ್ದ ದ್ವಿಚಕ್ರ ವಾಹನವನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತಾಲೂಕಿನ ಕೆರವಾಡ ಗ್ರಾಮದ ನಿವಾಸಿ ರಾಜು ಮಂಜು ಪೋತದಾರ ಎಂಬಾತನು ತನ್ನ ದ್ವಿಚಕ್ರ ವಾಹನದಲ್ಲಿ ಕಾಡುಪ್ರಾಣಿಯ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ.
ಪರಿಶೀಲನೆ ವೇಳೆ ವಾಹನದಲ್ಲಿದ್ದ ಮಾಂಸ ಕಾಡುಪ್ರಾಣಿಗೆ ಸಂಬಂಧಿಸಿದದ್ದೆಂದು ದೃಢಪಟ್ಟ ಹಿನ್ನೆಲೆಯಲ್ಲಿ, ಅರಣ್ಯಾಧಿಕಾರಿಗಳು ತಕ್ಷಣವೇ ಮಾಂಸ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ನಂತರ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.
ಕಾಡುಪ್ರಾಣಿಗಳ ಅಕ್ರಮ ಬೇಟೆ ಹಾಗೂ ಮಾಂಸ ಸಾಗಾಟವು ಪರಿಸರ ಸಮತೋಲನಕ್ಕೆ ಗಂಭೀರ ಅಪಾಯವನ್ನುಂಟುಮಾಡುವ ಹಿನ್ನೆಲೆಯಲ್ಲಿ, ಇಂತಹ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅರಣ್ಯ ಪ್ರದೇಶಗಳಲ್ಲಿ ಹಾಗೂ ನಗರ ಸುತ್ತಮುತ್ತ ನಡೆಯುವ ಅಕ್ರಮ ಚಟುವಟಿಕೆಗಳ ಮೇಲೆ ನಿಗಾವಹಿಸಲಾಗಿದ್ದು, ಮುಂದಿನ ದಿನಗಳಲ್ಲೂ ತಪಾಸಣೆ ತೀವ್ರಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಈ ಕಾರ್ಯಾಚರಣೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಕೆ.ಸಿ. ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಚೌವ್ಹಾಣ್ ಅವರ ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿಕಾರಿ ಎನ್.ಎಲ್. ನದಾಪ್ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಸಂದೀಪ್ ನಾಯ್ಕ, ಲೋಕೇಶ್, ಬಸಪ್ಪ ನ್ಯಾಮಗೌಡ, ಜ್ಯೋತಿ ನಂದಿಕೋಡ, ಗಸ್ತು ಅರಣ್ಯ ಪಾಲಕರಾದ ನಾರಾಯಣ ಜುಂಜವಾಡಕರ, ಮೋಹನ ಗೌಡ, ಸವಿತಾ ಹಾಗೂ ಕ್ಷೇಮಾಭಿವೃದ್ಧಿ ನೌಕರ ಚಂದ್ರಶೇಖರ ಮಿರಾಶಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಅರಣ್ಯ ಇಲಾಖೆ ಕೈಗೊಂಡ ಈ ಯಶಸ್ವಿ ಕಾರ್ಯಾಚರಣೆಯಿಂದ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಸಹಕಾರ ದೊರೆತಿದ್ದು, ಸಾರ್ವಜನಿಕರು ಇಂತಹ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವಂತೆ ಇಲಾಖೆ ಮನವಿ ಮಾಡಿದೆ.
