ಕರಾವಳಿ ವಾಯ್ಸ್ ನ್ಯೂಸ್
ಸಿದ್ದಾಪುರ: ಮೊಬೈಲ್ ಚಾರ್ಜ್ ಆಗದ ಕೋಪದಲ್ಲಿ ಬಸ್‌ನಲ್ಲೇ ಹೈಡ್ರಾಮಾ! “ನನ್ನ ಫೋನ್ ಚಾರ್ಜ್ ಆಗ್ತಿಲ್ಲ, ನಿನ್ನ ಮಷಿನ್ ಮಾತ್ರ ಹೇಗೆ ಚಾರ್ಜ್ ಆಗುತ್ತೆ? ಇದೇನು ನಿನ್ನಪ್ಪನ ಬಸ್ಸಾ?” ಎಂದು ಆಕ್ರೋಶದಿಂದ ಕೂಗಿದ ಪ್ರಯಾಣಿಕನೊಬ್ಬ, ಕ್ಷುಲ್ಲಕ ಕಾರಣಕ್ಕೆ ನಿರ್ವಾಹಕನ ಮೇಲೆಯೇ ಹಲ್ಲೆ ನಡೆಸಿ, ಇಟಿಎಂ ಮಷಿನ್ ಧ್ವಂಸ ಮಾಡಿದ ಘಟನೆ ಪಟ್ಟಣದಲ್ಲಿ ಆತಂಕ ಹುಟ್ಟಿಸಿದೆ.
ನವೆಂಬರ್ 4ರಂದು ಮಧ್ಯಾಹ್ನ 1.45ರ ಸುಮಾರಿಗೆ ಈ ಘಟನೆ ಸಿದ್ದಾಪುರದ ಭಗತ್‌ಸಿಂಗ್ ಸರ್ಕಲ್ ಬಳಿ ನಡೆದಿದೆ. ಯಲ್ಲಾಪುರ–ಹುಬ್ಬಳ್ಳಿ–ಮಂಗಳೂರು ಮಾರ್ಗದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಈ ನಾಟಕ ಜರುಗಿದ್ದು, ಆರೋಪಿ ಬೆಳಗಾವಿ ಜಿಲ್ಲೆಯ ಚಂದ್ರಶೇಖರ ಕಿತ್ತಲಿ ಎಂದು ಗುರುತಿಸಲಾಗಿದೆ.
ಚಾರ್ಜರ್ ಸಿಟ್ಟು: ಹಲ್ಲೆ, ಧ್ವಂಸ, ಬೆದರಿಕೆ!
ಮೂಲಗಳ ಪ್ರಕಾರ, ಕುಂದಾಪುರದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಆರೋಪಿ ಚಂದ್ರಶೇಖರ ತನ್ನ ಮೊಬೈಲ್‌ನ್ನು ಬಸ್‌ನ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಜೋಡಿಸಿದ್ದಾನೆ. ಆದರೆ ಫೋನ್ ಚಾರ್ಜ್ ಆಗದಿದ್ದ ಕೋಪದಲ್ಲಿ ಆತ ನೇರವಾಗಿ ನಿರ್ವಾಹಕ ವೀರಭದ್ರಯ್ಯ ಮಠದ್ ಅವರ ಮೇಲೆ ಗರಂ ಆಗಿದ್ದಾನೆ. ಬಸ್ ಭಗತ್ ಸಿಂಗ್ ಸರ್ಕಲ್ ತಲುಪುತ್ತಿದ್ದಂತೆ, ನಿನ್ನ ಮಷಿನ್ ಮಾತ್ರ ಹೇಗೆ ಚಾರ್ಜ್ ಆಗುತ್ತೆ? ಎಂದು ಕೂಗಾಡಿ ಜಗಳ ಶುರುಮಾಡಿದ್ದಾನೆ.
ನಿರ್ವಾಹಕರು ತಮ್ಮ ಇಟಿಎಂ ಮಷಿನ್‌ನ್ನು ಚಾರ್ಜ್‌ನಿಂದ ತೆಗೆದ ಕ್ಷಣ, ಆರೋಪಿ ಚಂದ್ರಶೇಖರ ಕೋಪದಿಂದ ಬೋರ್ಡ್ ಕಿತ್ತು ಬಿಸಾಡಿ, ಸರ್ಕಾರಿ ಸ್ವತ್ತಾದ ಇಟಿಎಂ ಮಷಿನ್‌ನ್ನೇ ಬಲವಂತವಾಗಿ ಎಸೆದಿದ್ದಾನೆ. ಅಷ್ಟಕ್ಕೂ ನಿಲ್ಲದೆ, ನಿರ್ವಾಹಕರ ಸಮವಸ್ತ್ರ ಹಿಡಿದು ಎಳೆದಾಡಿ ತಳ್ಳಿಹಾಕಿದ್ದು, ವೀರಭದ್ರಯ್ಯ ಅವರ ತಲೆಯ ಹಿಂಭಾಗಕ್ಕೆ ಗಾಯವಾಗಿದೆ.
ಹಲ್ಲೆ ಬಳಿಕ ಬಸ್‌ನಿಂದ ಇಳಿಯುವ ಮೊದಲು ಆರೋಪಿ, ‘ಹುಬ್ಬಳ್ಳಿಗೆ ಬಾ, ನಿನ್ನನ್ನು ಕೊಲೆ ಮಾಡದೇ ಬಿಡುವುದಿಲ್ಲ!’ ಎಂದು ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾನೆ. ಈ ಕೃತ್ಯದಿಂದ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಯಾಗಿದೆ.
ತಡರಾತ್ರಿ ಸಿದ್ದಾಪುರ ಠಾಣೆಗೆ ಹಾಜರಾದ ನಿರ್ವಾಹಕ ವೀರಭದ್ರಯ್ಯ ಮಠದ್ (49) ಅವರು ನೀಡಿದ ಲಿಖಿತ ದೂರಿನ ಮೇರೆಗೆ, ಸಿದ್ದಾಪುರ ಪೊಲೀಸರು ಆರೋಪಿ ಚಂದ್ರಶೇಖರ ಕಿತ್ತಲಿ ವಿರುದ್ಧ ಹಲ್ಲೆ, ಜೀವ ಬೆದರಿಕೆ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿ ಬಂಧನಕ್ಕೆ ತಯಾರಿ ನಡೆದಿದೆ.
ಸಾಧಾರಣ ಚಾರ್ಜರ್ ಸಿಟ್ಟು, ಈಗ ಗಂಭೀರ ಕಾನೂನು ಪ್ರಹಸನವಾಗಿ ಮಾರ್ಪಟ್ಟಿದೆ!


