ಕರಾವಳಿ ವಾಯ್ಸ್ ನ್ಯೂಸ್

ಶಿರಸಿ: ಸಾಮಾಜಿಕ ಜಾಲತಾಣದ ಪರಿಚಯವು ಪ್ರೀತಿಗೆ ತಿರುಗಿ, ಮದುವೆಯ ಭರವಸೆಯಾಗಿ ಬೆಳೆಯಿತು. ಆದರೆ ಕೊನೆಯಲ್ಲಿ ಅದು ವಂಚನೆಯ ಆರೋಪವಾಗಿ ಠಾಣೆ ಮೆಟ್ಟಿಲೇರಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಕಾರವಾರ ತಾಲೂಕಿನ ಗ್ರಾಮವೊಂದರ ಮೂಲದ ವಿಧವೆ ಮಹಿಳೆಯೊಬ್ಬರು ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಹಲವು ವರ್ಷಗಳಿಂದ ತನ್ನೊಂದಿಗೆ ಲೈಂಗಿಕ ಸಂಪರ್ಕ ಹೊಂದಿ, ನಂತರ ಮದುವೆಗೆ ನಿರಾಕರಿಸಿ ಅವಾಚ್ಯ ಶಬ್ದಗಳಿಂದ ಬೈದು ಮನೆಯಿಂದ ಹೊರಹಾಕಿರುವುದಾಗಿ ಮಹಿಳೆ ಆರೋಪಿಸಿದ್ದಾರೆ.

ದೂರಿನ ಪ್ರಕಾರ, ಶಿರಸಿ ತಾಲೂಕಿನ ಬರೂರು ಗ್ರಾಮದ ಅರಸೀಕೇರಿ ನಿವಾಸಿ ಕಿರಣ ಶಾಂತಾರಾಮ ಮೊಗೇರ ಎಂಬ ಯುವಕ 2023ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ಮಹಿಳೆಯ ಪರಿಚಯ ಮಾಡಿಕೊಂಡಿದ್ದಾನೆ. ಆನ್‌ಲೈನ್ ಮಾತುಕತೆ ನಿಧಾನವಾಗಿ ಆಪ್ತತೆಯಾಗಿ ಮಾರ್ಪಟ್ಟಿದ್ದು, ಮದುವೆಯಾಗುವುದಾಗಿ ಭರವಸೆ ನೀಡಿ ಮಹಿಳೆಯ ವಿಶ್ವಾಸ ಗಳಿಸಿದ್ದಾನೆ ಎನ್ನಲಾಗಿದೆ.

2023ರ ನವೆಂಬರ್ ತಿಂಗಳಲ್ಲಿ ಮಹಿಳೆಯನ್ನು ತನ್ನ ಊರಾದ ಬರೂರು ಗ್ರಾಮದ ಅರಸೀಕೇರಿಯ ಮನೆಗೆ ಕರೆತಂದಿದ್ದಾನೆ. ಆ ನಂತರ 31-01-2026ರವರೆಗೆ ನಿರಂತರವಾಗಿ ಅವಳೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದಾನೆ ಎಂಬುದು ದೂರಿನಲ್ಲಿದೆ. “ನೀನೇ ನನ್ನ ಜೀವನ ಸಂಗಾತಿ” ಎಂದು ಹೇಳಿ ಭವಿಷ್ಯದ ಕನಸು ಕಟ್ಟಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

ಮಹಿಳೆ ಈಗಾಗಲೇ ಮದುವೆಯಾಗಿ ಗಂಡನನ್ನು ಕಳೆದುಕೊಂಡಿದ್ದು, ಇಬ್ಬರು ಮಕ್ಕಳ ತಾಯಿ ಎನ್ನಲಾಗಿದೆ. ಜೀವನದಲ್ಲಿ ಮತ್ತೊಮ್ಮೆ ನೆಮ್ಮದಿ ಕಂಡುಕೊಳ್ಳುವ ನಿರೀಕ್ಷೆಯಲ್ಲಿ ಮದುವೆಗೆ ಒಪ್ಪಿಕೊಂಡಿದ್ದೆ. ಆದರೆ ಇತ್ತೀಚೆಗೆ ಮದುವೆಯ ವಿಚಾರ ಪ್ರಸ್ತಾಪಿಸಿದಾಗ ಯುವಕ ತೀವ್ರವಾಗಿ ವಿರೋಧಿಸಿ, ಅವಾಚ್ಯ ಶಬ್ದಗಳಿಂದ ಬೈದು ಮನೆಯಿಂದ ಹೊರಹಾಕಿದನೆಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಘಟನೆಯ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಕಿರಣ ಶಾಂತಾರಾಮ ಮೊಗೇರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯ ವಿರುದ್ಧ ವಂಚನೆ, ನಂಬಿಕೆ ದುರುಪಯೋಗ ಸೇರಿದಂತೆ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಆರಂಭವಾಗುವ ಸಂಬಂಧಗಳಲ್ಲಿ ಎಚ್ಚರಿಕೆಯ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ. ಪೊಲೀಸರು ಪ್ರಕರಣದ ವಿವಿಧ ಆಯಾಮಗಳನ್ನು ಪರಿಶೀಲಿಸುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.

 

 

 

 

Please Share: