ಜೊಯಿಡಾ: ತಾಲೂಕಿನ ಕ್ಯಾಸಲ್‌ರಾಕ್ ಸರ್ಕಾರಿ ಆಸ್ಪತ್ರೆ ಹತ್ತಿರ ವಾಸವಿದ್ದ ರಮಾದೇವಿ ಎಂಬ ಗೃಹಿಣಿ, ಇನ್‌ಸ್ಟಾಗ್ರಾಮ್ ಮೂಲಕ ಬಂದ “ಮನೆಬಿಟ್ಟು ಹೋಗದೆ ಕೆಲಸ ಮಾಡಿ, ಸುಲಭವಾಗಿ ಹಣ ಸಂಪಾದಿಸಿ” ಎಂಬ ಭರವಸೆಗೆ ಬಲಿಯಾಗಿ ಒಟ್ಟು ₹2,49,249 ಕಳೆದುಕೊಂಡಿದ್ದಾರೆ.

ಆಗಸ್ಟ್ 19ರಂದು ಅನನ್ಯ ಪಟೇಲ್ ಎನ್ನುವವರು ಮೊದಲಿಗೆ ಸಣ್ಣ ಟಾಸ್ಕ್‌ಗಳ ಹೆಸರಿನಲ್ಲಿ 120 ರೂ. ಮತ್ತು 200 ರೂ. ಅವರ ಖಾತೆಗೆ ಜಮಾ ಮಾಡಿ ನಂಬಿಕೆ ಮೂಡಿಸಿದರು. ಬಳಿಕ ಬಿಟ್‌ಕಾಯಿನ್ ಖಾತೆ ತೆರೆಯುವಂತೆ ಹೇಳಿ ಟೆಲಿಗ್ರಾಂ ಗುಂಪಿನಲ್ಲಿ ಸೇರಿಸಿ, ಹೂಡಿಕೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಕಸಿದುಕೊಂಡಿದ್ದಾರೆ. ಶ್ವೇತಾ ಎಂಬ ಹೆಣ್ಣುಮಗಳು “ಖಾತೆಯಲ್ಲಿ ತಪ್ಪಾಗಿದೆ, ಸರಿಪಡಿಸಲು ಹೆಚ್ಚುವರಿ ಹಣ ಬೇಕು” ಎಂದು ಹೇಳಿ, ಹಂತ ಹಂತವಾಗಿ ₹1,93,700 ವಂಚಿಸಿದರು. ಕೊನೆಗೆ ಲಾಭದ ಹೆಸರಿನಲ್ಲಿ ಕೇವಲ ₹6,230 ಮಾತ್ರ ಹಿಂದಿರುಗಿಸಿದ್ದಾರೆ.

ಮೊದಲ ಬಾರಿಗೆ ಮೋಸವಾದರೂ, ಮತ್ತೆ ಇನ್‌ಸ್ಟಾಗ್ರಾಮ್‌ನಲ್ಲಿ ಕಾವ್ಯಾ ಅಗರವಾಲ್ ಎಂಬ ಹೆಸರಿನಲ್ಲಿ ಮತ್ತೊಂದು ಬಲೆ ಬಿದ್ದಿದೆ. “₹800 ಹೂಡಿದರೆ ₹14,999 ಲಾಭ” ಎಂದು ಆಮಿಷ ತೋರಿಸಿ, “ಯುಎಸ್ ಡಾಲರ್ ವರ್ಗಾವಣೆ, ಕಂಪನಿ ಉದ್ಯೋಗಿ ಚಾರ್ಜ್, ಜಿಎಸ್‌ಟಿ ಪಾವತಿ” ಎಂಬ ನೆಪದಲ್ಲಿ ₹55,549 ವಂಚಿಸಿದ್ದಾರೆ.

ಎರಡೂ ಹಂತಗಳಲ್ಲಿ ಸೇರಿ ₹2,49,249 ಕಳೆದುಕೊಂಡ ರಮಾದೇವಿ ಕೊನೆಗೆ ಬೇರೆ ದಾರಿ ಕಾಣದೆ ಪತಿ ಸುರೇಶ್ ಅವರಿಗೆ ಸತ್ಯ ಬಿಚ್ಚಿಟ್ಟರು. ಅವರು ತಕ್ಷಣವೇ 1930 ವಂಚನೆ ದೂರು ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಪ್ರಕರಣವನ್ನು ರಾಮನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

ಸದ್ಯ ಪೊಲೀಸರು ವಂಚಕರ ಪತ್ತೆಹಚ್ಚಿ ಕಳೆದುಹೋದ ಹಣ ವಾಪಸ್ ಪಡೆಯಲು ತನಿಖೆ ಆರಂಭಿಸಿದ್ದು, “ಆನ್‌ಲೈನ್ ಕೆಲಸ” ಎಂಬ ಹೆಸರಿನಲ್ಲಿ ಬರುವ ಆಮಿಷ ಜಾಹೀರಾತುಗಳಿಗೆ ಯಾರೂ ನಂಬಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

 

 

 

 

Please Share: