ಬೆಳಗಾವಿ: ಭಾರತ–ಪಾಕಿಸ್ತಾನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯ ಸುತ್ತ ರಾಜಕೀಯ ವಿವಾದ ಮತ್ತೆ ತಲೆದೋರಿದೆ. ಬೆಳಗಾವಿಯಲ್ಲಿ ಮಾತನಾಡಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್, ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಲು ಭಾರತಕ್ಕೆ ಯಾವುದೇ ಅವಶ್ಯಕತೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಹಲ್ಗಾಮ್ ಘಟನೆಯಾಗಿ ಐದು ತಿಂಗಳು ಕಳೆದರೂ 26 ಜನ ಹುತಾತ್ಮರ ಕಣ್ಣೀರನ್ನು ಒರೆಸಲಾಗಿಲ್ಲ, ಇಂತಹ ಸಂದರ್ಭದಲ್ಲಿ ಕ್ರಿಕೆಟ್ ಪಂದ್ಯ ಆಯೋಜಿಸುವುದು ಕೇಂದ್ರ ಸರ್ಕಾರದ ನಾಚಿಕೆಗೇಡಿತನ ಎಂದು ಅವರು ತೀವ್ರವಾಗಿ ಆರೋಪಿಸಿದರು.

ಭಾರತೀಯ ಜನತಾ ಪಕ್ಷವು ಹಿಂದೂಗಳ ಸುರಕ್ಷಿತೆಗೆ ಮೂರು ಬಾರಿ ಅಧಿಕಾರಕ್ಕೆ ಬಂದಿದ್ದರೂ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಲು ಮುಂದಾಗಿರುವುದು ದೇಶದ ಮಾನ ಮರ್ಯಾದೆಗೆ ಧಕ್ಕೆ ತಂದಂತಾಗಿದೆ ಎಂದು ಮುತಾಲಿಕ್ ಹೇಳಿದರು. ಭಯೋತ್ಪಾದಕರ ಫ್ಯಾಕ್ಟರಿಯಂತೆ ಇರುವ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವ ಅವಶ್ಯಕತೆಯೇ ಇಲ್ಲ, ಕೇವಲ ಹಣದ ಆಸೆಗೆ ಬಿಸಿಸಿಐ ತಲೆಬಾಗಿರುವ ನಿಲುವು ಸ್ಪಷ್ಟವಾಗಿದೆ ಎಂದು ಅವರು ಕಿಡಿಕಾರಿದರು.

ಕೇಂದ್ರ ಸರ್ಕಾರವು ತಕ್ಷಣವೇ ಪಾಕಿಸ್ತಾನ ವಿರುದ್ಧ ಕ್ರಿಕೆಟ್ ನಿಷೇಧ ಘೋಷಿಸಬೇಕು ಎಂದು ಅವರು ಒತ್ತಾಯಿಸಿ, ಬಿಸಿಸಿಐ ಮತ್ತು ಐಸಿಸಿ ಮುಖ್ಯಸ್ಥರ ಮಕ್ಕಳು ಪಹಲ್ಗಾಮ್ ದಾಳಿಯಲ್ಲಿ ಸತ್ತಿಲ್ಲದ ಕಾರಣ ಅವರಿಗೆ ಜನರ ನೋವು ಅರ್ಥವಾಗುವುದಿಲ್ಲ ಎಂದು ವ್ಯಂಗ್ಯವಾಡಿದರು. ದೇಶದ ಗೌರವದ ದೃಷ್ಟಿಯಿಂದ ಈ ಪಂದ್ಯವನ್ನು ರದ್ದುಪಡಿಸಲೇಬೇಕು, ಇಲ್ಲವಾದರೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಣಯ ಅಪಾಯಕಾರಿ ಎಂದು ಮುತಾಲಿಕ್ ಎಚ್ಚರಿಕೆ ನೀಡಿದರು.

 

Please Share: