ಕರಾವಳಿ ವಾಯ್ಸ್ ನ್ಯೂಸ್

ಬೆಂಗಳೂರು: ದಸರಾ ರಜೆಗಳನ್ನು ವಿಸ್ತರಿಸಿದ್ದರಿಂದ ಶಾಲಾ ದಿನಗಳ ಕೊರತೆ ಉಂಟಾದ ಹಿನ್ನೆಲೆಯಲ್ಲಿ, ರಾಜ್ಯ ಶಾಲಾ ಶಿಕ್ಷಣ ಇಲಾಖೆ ಹೊಸ ಸೂಚನೆ ಹೊರಡಿಸಿದೆ.

ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ದಸರಾ ರಜೆಯನ್ನು ಅಕ್ಟೋಬರ್ 18ರವರೆಗೆ ವಿಸ್ತರಿಸಿದ ಪರಿಣಾಮ, ಒಟ್ಟು 10 ಶಾಲಾ ದಿನಗಳ ಪಾಠ ಅವಧಿ ವ್ಯತ್ಯಯಗೊಂಡಿದೆ. ಈ ಕೊರತೆಯನ್ನು ಸರಿದೂಗಿಸಲು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹೆಚ್ಚುವರಿ ಪಾಠ ಅವಧಿಗಳನ್ನು ನಡೆಸಲು ಇಲಾಖೆಯು ಆದೇಶಿಸಿದೆ.

ಪ್ರೌಢಶಾಲೆಗಳಿಗೆ:8ರಿಂದ 10ನೇ ತರಗತಿಗಳ ವಿದ್ಯಾರ್ಥಿಗಳಿಗೆ ಒಟ್ಟು 66 ಅವಧಿಗಳ ಕೊರತೆಯನ್ನು ಭರ್ತಿಸಲು ನವೆಂಬರ್ 7, 2025ರಿಂದ ಜನವರಿ 24, 2026ರವರೆಗೆ ಪ್ರತಿದಿನ ಒಂದು ಹೆಚ್ಚುವರಿ ಅವಧಿ ನಡೆಯಲಿದೆ. ಈ ಪಾಠವನ್ನು ಶಾಲೆ ಪ್ರಾರಂಭದ ಮೊದಲು ಅಥವಾ ನಂತರ, ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ನಡೆಸಬಹುದು ಎಂದು ಸೂಚಿಸಲಾಗಿದೆ.

ಪ್ರಾಥಮಿಕ ಶಾಲೆಗಳಿಗೆ:1ರಿಂದ 7/8ನೇ ತರಗತಿವರೆಗೆ ಒಟ್ಟು 74 ಅವಧಿಗಳ ಕೊರತೆಯನ್ನು ನೀಗಿಸಲು ನವೆಂಬರ್ 7, 2025ರಿಂದ ಫೆಬ್ರವರಿ 5, 2026ರವರೆಗೆ ಪ್ರತಿದಿನ ಒಂದು ಹೆಚ್ಚುವರಿ ಪಾಠ ನಡೆಯಲಿದೆ.

ಇದಲ್ಲದೆ, ಜನವರಿ 2026ರಿಂದ ಆರಂಭವಾಗುವ ವಾರ್ಷಿಕ ಪರೀಕ್ಷೆಗೂ ಮೊದಲು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಆಯೋಜಿಸಲು ಇಲಾಖೆಯು ಸೂಚನೆ ನೀಡಿದೆ. ವಿಶೇಷವಾಗಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಶಾಲೆಗಳು ಹೆಚ್ಚುವರಿ ಗಮನ ಕೊಡಬೇಕೆಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

 

Please Share: