ಕರಾವಳಿ ವಾಯ್ಸ್ ನ್ಯೂಸ್
ಕುಮಟಾ: ಅಂಕೋಲಾ–ಕುಮಟಾ ತಾಲೂಕಿನ ಗಡಿಭಾಗದಲ್ಲಿರುವ ಗಂಗಾವಳಿ ಸೇತುವೆಯ ತಳಭಾಗದಲ್ಲಿ ಶುಕ್ರವಾರ ಮುಂಜಾನೆ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಮೃತದೇಹದ ಗುರುತು ಪತ್ತೆಯಾಗಿದೆ.
ಮೃತರನ್ನು ಮಾದನಗೇರಿ ಹೊಸನಗರದ ಮಂಜು ರಾಮಾ ಹರಿಕಂತ್ರ (35) ಎಂದು ಗುರುತಿಸಲಾಗಿದೆ. ಮೀನುಗಾರಿಕೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಅವರು ಬುಧವಾರ ಮೀನಿಗೆ ಗಾಳ ಹಾಕಲು ಹೋಗುವುದಾಗಿ ಮನೆಯವರಿಗೆ ತಿಳಿಸಿ ಮನೆಯಿಂದ ತೆರಳಿದ್ದರು ಎನ್ನಲಾಗಿದೆ.
ಬಳಿಕ ಅವರು ನಾಪತ್ತೆಯಾಗಿದ್ದು, ಗಾಳ ಹಾಕುವ ವೇಳೆ ಆಕಸ್ಮಿಕವಾಗಿ ನದಿಗೆ ಜಾರಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಶುಕ್ರವಾರ ಬೆಳಗ್ಗೆ ಸುಮಾರು 6.30ರ ವೇಳೆಗೆ ಗಂಗಾವಳಿ ಸೇತುವೆಯ ತಳಭಾಗದ ನದಿ ದಡಕ್ಕೆ ಮೃತದೇಹ ತೇಲಿ ಬಂದಿರುವುದು ಸ್ಥಳೀಯರ ಗಮನಕ್ಕೆ ಬಂದಿತ್ತು.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಕ್ರಮ ಕೈಗೊಂಡಿರುವ ಪೊಲೀಸರು ಘಟನೆ ಕುರಿತು ತನಿಖೆ ಮುಂದುವರಿಸಿದ್ದಾರೆ.


