ಕರಾವಳಿ ವಾಯ್ಸ್ ನ್ಯೂಸ್
ಜೋಯಿಡಾ: ಖಾನಾಪುರ–ಹೆಮ್ಮಡಗಾ ರಸ್ತೆಯ ಪಾಲಿ ಕ್ರಾಸ್ ಬಳಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನಕ್ಕೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 14 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆತನ ತಂದೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಅಪಘಾತದಲ್ಲಿ ಸಾವನ್ನಪ್ಪಿದ ಬಾಲಕನನ್ನು ತಾಲೂಕಿನ ವರ್ಲೆವಾಡಿ ಗ್ರಾಮದ ಸಮರ್ಥ್ ಸಂಜಯ್ ದೇಸಾಯಿ (14) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ತಂದೆ ಸಂಜಯ್ ದೇಸಾಯಿ (49) ಅವರನ್ನು ತಕ್ಷಣ ಬೆಳಗಾವಿಯ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಮಾಹಿತಿಯಂತೆ, ಸಮರ್ಥ್ ದೇಸಾಯಿ ಖಾನಾಪುರ ತಾಲೂಕಿನ ಭಂಡಾರಗಾಳಿ ಗ್ರಾಮದ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಶುಕ್ರವಾರ ಅಖೇತಿಯ ಮೇಡಾದಲ್ಲಿ ನಡೆದ ಮಂದಿರದ ವಾರ್ಷಿಕ ಹಬ್ಬಕ್ಕೆ ತಂದೆಯೊಂದಿಗೆ ತೆರಳಿ ಮರಳುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಸಂಜೆ ಸುಮಾರು 5 ಗಂಟೆಯ ವೇಳೆಗೆ ಪಾಲಿ ಕ್ರಾಸ್ ಬಳಿ ವೇಗವಾಗಿ ಬಂದ ಟ್ರಕ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಬಾಲಕ ಸಮರ್ಥ್ ದೇಸಾಯಿ ಸ್ಥಳದಲ್ಲೇ ಮೃತಪಟ್ಟರೆ, ತಂದೆ ಸಂಜಯ್ ದೇಸಾಯಿ ಗಂಭೀರವಾಗಿ ಗಾಯಗೊಂಡರು. ಸ್ಥಳೀಯರು ತಕ್ಷಣ ಸ್ಪಂದಿಸಿ ಗಾಯಾಳುವನ್ನು ಆಂಬ್ಯುಲೆನ್ಸ್ ಮೂಲಕ ಬೆಳಗಾವಿಯ ಸಿವಿಲ್ ಆಸ್ಪತ್ರೆಗೆ ರವಾನಿಸಿದರು.
ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣವಾದ ಟ್ರಕ್ ಚಾಲಕನ ವಿರುದ್ಧ ತನಿಖೆ ಮುಂದುವರಿದಿದೆ.
