ಕಾರವಾರ: ಜಿಲ್ಲೆಯಾದ್ಯಂತ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿದ್ದರೂ, ಹೆಲ್ಮೆಟ್ ಇಲ್ಲದ ಕಾರಣದಿಂದ ಸಾವುಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ “ಹೆಲ್ಮೆಟ್ ಜಾಗೃತಿ ವಾರ” ಅಭಿಯಾನಕ್ಕೆ ಚಾಲನೆ ನೀಡಿದೆ.
ಸೋಮವಾರ ಕಾರವಾರದ ಪೊಲೀಸ್ ಕವಾಯತು ಮೈದಾನದಿಂದ ಆರಂಭವಾದ ಬೃಹತ್ ಬೈಕ್ ರ‍್ಯಾಲಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಚಾಲನೆ ನೀಡಿದರು. ಹೆಲ್ಮೆಟ್ ಧರಿಸಿದ ನೂರಕ್ಕೂ ಹೆಚ್ಚು ಪೊಲೀಸರ ಬೈಕ್ ಪಡೆ ಕಾಜುಬಾಗ ರಸ್ತೆಯಿಂದ ಎಸ್ಪಿ ಕಚೇರಿ, ಎಂ.ಜಿ ರಸ್ತೆ, ಸುಭಾಷ ವೃತ್ತ, ಹೂವಿನ ಚೌಕ, ಚಿತ್ತಾಕುಲ, ಕದ್ರಾ ವೃತ್ತದ ಮಾರ್ಗವಾಗಿ ‘ಐ ಲವ್ ಕಾರವಾರ’ ಉದ್ಯಾನದಲ್ಲಿ ಕೊನೆಗೊಂಡಿತು.
ರ‍್ಯಾಲಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ದೀಪನ್ ಎಂ.ಎನ್ ಅವರು, “ಹೆಲ್ಮೆಟ್ ಧರಿಸದ ಸವಾರರಿಂದ ಅನೇಕ ಪ್ರಾಣಾಪಾಯ ಪ್ರಕರಣಗಳು ಉಂಟಾಗಿವೆ. ಮನೆಯವರೂ ತಮ್ಮ ಮಕ್ಕಳಿಗೆ ಹೆಲ್ಮೆಟ್ ಕುರಿತು ಕಟ್ಟು ನಿಟ್ಟಾಗಿ ತಿಳಿಸಬೇಕು. ಕೂದಲು ಹೋದರೂ ಮತ್ತೆ ಬರುತ್ತದೆ, ಆದರೆ ಪ್ರಾಣ ಹೋದರೆ ಮತ್ತೆ ಬರುವುದಿಲ್ಲ. ಮುಂದಿನ ತಿಂಗಳಿಂದ ನಿಯಮ ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುವುದು,” ಎಂದು ಎಚ್ಚರಿಸಿದರು.
ಅವರು ಮುಂದುವರಿಸಿ, “ಈ ವರ್ಷ ಜಿಲ್ಲೆಯಾದ್ಯಂತ ಈಗಾಗಲೇ 33,000ಕ್ಕೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. 150 ಪರವಾನಗಿಗಳು ರದ್ದು ಮಾಡಲಾಗಿದೆ. ಮದ್ಯಪಾನ ಮಾಡಿ ವಾಹನ ಓಡಿಸಿದ 307 ಪ್ರಕರಣಗಳು ದಾಖಲಾಗಿದೆ. ಕಳೆದ ವರ್ಷ 260 ಮಂದಿ, ಈ ವರ್ಷ ಈಗಾಗಲೇ 179 ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ,” ಎಂದು ವಿವರಿಸಿದರು.
ಜಾಗೃತಿ ಅಭಿಯಾನ ಭಾಗವಾಗಿ ‘ಮನೆ ಮನೆ ಪೊಲೀಸ್ ಕಾರ್ಯ’ ಮೂಲಕ ಸಂಚಾರ ನಿಯಮಗಳ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಕೆಲವು ಠಾಣಾ ವ್ಯಾಪ್ತಿಯಲ್ಲಿ ಈ ಕಾರ್ಯ ಶೇ.90ರಷ್ಟು ಪೂರ್ಣಗೊಂಡಿದೆ ಎಂದು ಎಸ್ಪಿ ಹೇಳಿದರು.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ನಾಗರಿಕರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು. “ಹೆಲ್ಮೆಟ್ ಧರಿಸಿ, ಸುರಕ್ಷಿತವಾಗಿ ಮನೆಗೆ ಮರಳಿ” ಎಂಬ ಪೋಸ್ಟರ್‌ಗಳು ಹಾಗೂ ಘೋಷಣೆಗಳು ರ‍್ಯಾಲಿಗೆ ವಿಶೇಷ ಆಕರ್ಷಣೆಯಾಗಿದ್ದವು.


