ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಮತ್ತೊಮ್ಮೆ ನಿಷೇಧಿತ ವಸ್ತುಗಳು ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಭಾರ ಜೈಲು ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣೂರು ಅವರು ನಡೆಸಿದ ಅಚ್ಚರಿ ತಪಾಸಣೆಯಲ್ಲಿ ಏಳು ಮೊಬೈಲ್ ಫೋನ್‌ಗಳು ಸೇರಿದಂತೆ ಹಲವು ನಿಷೇಧಿತ ವಸ್ತುಗಳು ಜಪ್ತಿ ಆಗಿವೆ. ಇತ್ತೀಚೆಗೆ ಜೈಲಿನಲ್ಲಿ ನಡೆದ ಗಲಾಟೆಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು ಬ್ಯಾರಕ್‌ಗಳನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ ಈ ಅಕ್ರಮ ವಸ್ತುಗಳು ಪತ್ತೆಯಾಗಿವೆ.
ಕಳೆದ ಒಂದು ವಾರದ ಅವಧಿಯಲ್ಲಿ ಜೈಲಿನಲ್ಲಿ ಎರಡು ಬಾರಿ ಗಂಭೀರ ಗಲಾಟೆಗಳು ನಡೆದಿದ್ದು, ಮಾದಕ ಪದಾರ್ಥಗಳನ್ನು ನೀಡಲಿಲ್ಲ ಎಂಬ ಕಾರಣಕ್ಕೆ ಕೆಲವು ಕೈದಿಗಳು ಅಶಾಂತಿ ಸೃಷ್ಟಿಸಿದ್ದರು ಎನ್ನಲಾಗಿದೆ. ಗಲಾಟೆ ವೇಳೆ ಜೈಲರ್ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವುದು, ಜೈಲಿನೊಳಗಿನ ಕಂಪ್ಯೂಟರ್ ಮತ್ತು ದೂರದರ್ಶನಗಳನ್ನು ಒಡೆದು ಹಾಕಿರುವುದೂ ದಾಖಲಾಗಿದೆ. ಈ ಘಟನೆಗಳು ಜೈಲಿನ ಭದ್ರತೆ ಮತ್ತು ಆಡಳಿತದ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿವೆ.
ಘಟನೆಗಳ ಗಂಭೀರತೆಯನ್ನು ಪರಿಗಣಿಸಿದ ಜೈಲು ಅಧಿಕಾರಿಗಳು ಬ್ಯಾರಕ್‌ಗಳ ಸಮಗ್ರ ತಪಾಸಣೆ ನಡೆಸಿದ್ದು, ಅದರಲ್ಲಿ ಮೊಬೈಲ್‌ಗಳು ಸೇರಿದಂತೆ ನಿಷೇಧಿತ ವಸ್ತುಗಳು ಸಿಕ್ಕಿವೆ. ಈ ಸಂಬಂಧ ಕಾರವಾರ ನಗರದ ಶಹರ ಪೊಲೀಸ್ ಠಾಣೆಯಲ್ಲಿ ಜೈಲರ್ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಿಷೇಧಿತ ವಸ್ತುಗಳು ಜೈಲಿನೊಳಗೆ ಹೇಗೆ ಪ್ರವೇಶಿಸಿದವು ಎಂಬ ಬಗ್ಗೆ ಆಂತರಿಕ ತನಿಖೆಯೂ ನಡೆಯುತ್ತಿದೆ.
ಇದರ ನಡುವೆಯೇ, ಜೈಲಿನ ಶಿಸ್ತು ಕಾಪಾಡುವ ಉದ್ದೇಶದಿಂದ ಮಂಗಳೂರು ಮೂಲದ ನಾಲ್ವರು ಕೈದಿಗಳನ್ನು ರಾಜ್ಯದ ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿದೆ. ಎರಡು ತಿಂಗಳ ಹಿಂದೆ ಮಂಗಳೂರು ಜೈಲಿನಿಂದ ಈ ನಾಲ್ವರನ್ನು ಕಾರವಾರ ಜೈಲಿಗೆ ತರಲಾಗಿತ್ತು. ಇವರೇ ಇತ್ತೀಚಿನ ಗಲಾಟೆಗಳಿಗೆ ಕಾರಣರಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಳ್ಳಾರಿ ಹಾಗೂ ಬೆಳಗಾವಿ ಜೈಲುಗಳಿಗೆ ವರ್ಗಾಯಿಸಲಾಗಿದೆ.

