ಕರಾವಳಿ ವಾಯ್ಸ್ ನ್ಯೂಸ್
ಬೆಂಗಳೂರು: ನಗರದಲ್ಲಿ ಗ್ಯಾಸ್ ಗೀಸರ್ ಸೋರಿಕೆಯಿಂದ ತಾಯಿ ಮತ್ತು ನಾಲ್ಕು ವರ್ಷದ ಮಗು ಸಾವನ್ನಪ್ಪಿದ ಘಟನೆ ಗೋವಿಂದರಾಜನಗರದಲ್ಲಿ ನಡೆದಿದೆ. ಈ ದುರ್ಘಟನೆಯಿಂದ ಪ್ರದೇಶದಲ್ಲಿ ದುಃಖದ ವಾತಾವರಣ ಆವರಿಸಿದೆ.
ಮೃತರನ್ನು 26 ವರ್ಷದ ಚಾಂದಿನಿ ಹಾಗೂ ಆಕೆಯ ನಾಲ್ಕು ವರ್ಷದ ಮಗುವಾದ ಯುವಿ ಎಂದು ಗುರುತಿಸಲಾಗಿದೆ. ಬೆಳಿಗ್ಗೆ ಮನೆಯಲ್ಲಿ ಸ್ನಾನಕ್ಕೆ ತೆರಳಿದ ತಾಯಿ-ಮಗು ಬಹಳ ಹೊತ್ತು ಹೊರಬರದಿರುವುದನ್ನು ಗಮನಿಸಿದ ಮನೆಯವರು ಬಾಗಿಲು ತೆರೆದು ನೋಡಿದಾಗ ಇಬ್ಬರೂ ಅಚೇತನ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ.
ತಕ್ಷಣವೇ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತು. ಆದರೆ ಗ್ಯಾಸ್ ಗೀಸರ್‌ನಿಂದ ಹೊರಬಂದ ವಿಷಕಾರಿ ಅನಿಲ ವ್ಯವಸ್ಥೆಗಿಂತಲೂ ವೇಗವಾಗಿ ದೇಹಕ್ಕೆ ಪರಿಣಾಮ ಬೀರಿರುವುದರಿಂದ ಇಬ್ಬರ ಜೀವ ಉಳಿಸಲಾಗದೆ ವೈದ್ಯರು ಮೃತರೆಂದು ಘೋಷಿಸಿದರು.
ಪ್ರಾಥಮಿಕ ಮಾಹಿತಿ ಪ್ರಕಾರ, ಸ್ನಾನಗೃಹದಲ್ಲಿದ್ದ ಗ್ಯಾಸ್ ಗೀಸರ್‌ನ ಪೈಪ್ ಸಡಿಲವಾಗಿದ್ದು, ಅನಿಲ ಸೋರಿಕೆ ಸಂಭವಿಸಿರುವುದೆಂದು ಅಂದಾಜಿಸಲಾಗಿದೆ. ಸಣ್ಣ ಗಾತ್ರದ ಸ್ನಾನಗೃಹದಲ್ಲಿ ಕಿಟಕಿ ಅಥವಾ ಹವಾ ಸಂಚಲನದ ವ್ಯವಸ್ಥೆ ಸರಿಯಾಗಿರದೆ ಇರುವುದೂ ದುರಂತಕ್ಕೆ ಕಾರಣವಾಗಿರಬಹುದು ಎಂಬ ಶಂಖೆಯೂ ವ್ಯಕ್ತವಾಗಿದೆ.
ಘಟನೆಯ ನಂತರ ಸ್ಥಳಕ್ಕೆ ಭೇಟಿ ನೀಡಿದ ಗೋವಿಂದರಾಜನಗರ ಪೊಲೀಸ್ ಸಿಬ್ಬಂದಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಪ್ರಾರಂಭಿಸಿದ್ದಾರೆ. ಗ್ಯಾಸ್ ಗೀಸರ್ ಬಳಸುವ ಮನೆಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂಬ ಜಾಗೃತಿ ಮೂಡಿಸುವ ಅಗತ್ಯವೂ ಈ ಘಟನೆ ಮತ್ತೊಮ್ಮೆ ಮನಗಾಣಿಸಿದೆ.

