ಕರಾವಳಿ ವಾಯ್ಸ್ ನ್ಯೂಸ್
ಪಟನಾ: ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ರಾಜಕೀಯ ಪಕ್ಷಗಳ ಭರವಸೆಗಳು ಪರಾಕಾಷ್ಠೆ ತಲುಪುತ್ತಿವೆ. ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ನೌಕರಿ ನೀಡಲಾಗುತ್ತದೆ ಎಂದು ಆರ್‌ಜೆಡಿ ನಾಯಕ ಹಾಗೂ ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಘೋಷಣೆ ಮಾಡಿದ್ದಾರೆ.
ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 20 ದಿನಗಳಲ್ಲಿ ಪ್ರತಿ ಕುಟುಂಬಕ್ಕೂ ಸರ್ಕಾರಿ ನೌಕರಿ ಖಾತರಿಪಡಿಸುವ ಕಾನೂನು ರೂಪಿಸಲಾಗುತ್ತದೆ. 20 ತಿಂಗಳೊಳಗೆ ಅದರ ಜಾರಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಹಿಂದಿನ ಚುನಾವಣೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಉದ್ಯೋಗ ನೀಡಿದ್ದೆ. ಈ ಬಾರಿ ಅಧಿಕಾರ ಬಂದರೆ ಅದಕ್ಕಿಂತಲೂ ಹೆಚ್ಚು ಹುದ್ದೆಗಳನ್ನು ನೀಡುತ್ತೇನೆ,” ಎಂದು ಹೇಳಿದ್ದಾರೆ.
ತೇಜಸ್ವಿ ಯಾದವ್ ಅವರ ಈ ಭರವಸೆ ಬಿಹಾರದ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅಂಕಿ-ಅಂಶದ ಲೆಕ್ಕಾಚಾರದಲ್ಲಿ ಈ ಘೋಷಣೆ ಕಾರ್ಯಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ, ಆರ್‌ಜೆಡಿ ಈ ಬಾರಿ ಏಕಾಂಗಿಯಾಗಿ ಅಧಿಕಾರ ಹಿಡಿಯುವ ತಂತ್ರದ ಭಾಗವಾಗಿ ಈ “ಭರ್ಜರಿ ಆಫರ್” ನೀಡಿದೆ.
ಇನ್ನೊಂದೆಡೆ, ಆಡಳಿತಾರೂಢ ಜೆಡಿಯು–ಬಿಜೆಪಿ ಮೈತ್ರಿಕೂಟವೂ ವೋಟು ಹಿಡಿಯಲು ಸಕ್ಕರೆ ಚಿಟ್ಟೆ ಬಿಟ್ಟಂತಾಗಿದೆ. ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯಡಿ 75 ಲಕ್ಷ ಮಹಿಳೆಯರಿಗೆ ತಲಾ ₹10,000, ನಿರುದ್ಯೋಗಿ ಯುವಕರಿಗೆ ಮಾಸಿಕ ₹1,000 ಭತ್ಯೆ, ವೃದ್ಧರು–ವಿಧವೆಯರು–ಅಂಗವಿಕಲರಿಗೆ ಪಿಂಚಣಿ ₹400ರಿಂದ ₹1,000ಕ್ಕೆ, ಪತ್ರಕರ್ತರ ಪಿಂಚಣಿ ₹6,000ರಿಂದ ₹15,000ಕ್ಕೆ ಹೆಚ್ಚಿಸಲಾಗಿದೆ.
ಇಷ್ಟೇ ಅಲ್ಲದೆ ಪ್ರತಿ ಕುಟುಂಬಕ್ಕೂ 125 ಯುನಿಟ್ ಉಚಿತ ವಿದ್ಯುತ್, ಎಸ್ಟಿ ವಿಕಾಸ್ ಮಿತ್ರ ಯೋಜನೆಯಡಿ ಟ್ಯಾಬ್ಲೆಟ್ ಖರೀದಿಗೆ ₹25,000, ಹಾಗೂ ಸರ್ಕಾರಿ ಹುದ್ದೆಗಳಲ್ಲಿ ಸ್ಥಳೀಯ ಮಹಿಳೆಯರಿಗೆ ಮೀಸಲು ನೀಡುವ ಘೋಷಣೆಯೂ ಹೊರಬಂದಿದೆ.


