ಮಂಗಳೂರು: ಕರಾವಳಿಯ ಸಾಂಪ್ರದಾಯಿಕ ಜನಪದ ಕ್ರೀಡೆಯಾದ ಕಂಬಳಕ್ಕೆ ರಾಜ್ಯ ಸರ್ಕಾರದಿಂದ ಅಧಿಕೃತ ಮಾನ್ಯತೆ ದೊರೆತಿದೆ. ಕರ್ನಾಟಕ ಕ್ರೀಡಾ ಪ್ರಾಧಿಕಾರದಡಿ ‘ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್’ ಅನ್ನು ರಚಿಸಿ, ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಸರ್ಕಾರವು ಅಧಿಕೃತ ಮಾನ್ಯತೆ ನೀಡಿದೆ.
ಈ ಮೂಲಕ ಕರಾವಳಿಯ ನಾಡಿನ ಗೌರವ, ಪಾರಂಪರ್ಯ ಮತ್ತು ಜನಪದ ಸಂಸ್ಕೃತಿಯ ಗುರುತು ಕಂಬಳ ಈಗ ರಾಜ್ಯದ ಅಧಿಕೃತ ಕ್ರೀಡೆಗಳ ಪಟ್ಟಿಗೆ ಸೇರ್ಪಡೆಗೊಂಡಂತಾಗಿದೆ.
ಅಧಿಕೃತ ಆದೇಶದ ಪ್ರಕಾರ, ಅಸೋಸಿಯೇಷನ್ ಪ್ರತಿವರ್ಷ ಜೂನ್ 30ರೊಳಗೆ ತನ್ನ ಆಡಳಿತ ವರದಿ, ವಾರ್ಷಿಕ ಲೆಕ್ಕಪತ್ರಗಳ ಆಡಿಟ್ ವರದಿ, ಸಾಮಾನ್ಯ ಸಭೆ ಹಾಗೂ ಕಾರ್ಯಕಾರಿ ಸಮಿತಿ ಸಭೆಗಳ ನಡವಳಿ ಪ್ರತಿ ಹಾಗೂ ಕಾರ್ಯಕ್ರಮಗಳ ಕ್ಯಾಲೆಂಡರ್ ಜೊತೆಗೆ ಸಂಘಗಳ ನೋಂದಣಿ ಕಾಯಿದೆ 1960ರಡಿ ನವೀಕರಣ ದಾಖಲೆಗಳನ್ನು ಕ್ರೀಡಾ ಇಲಾಖೆಗೆ ಸಲ್ಲಿಸಬೇಕಾಗಿದೆ.
ಮೊದಲ ಸಭೆ ಅ.15ರಂದು:ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಅಕ್ಟೋಬರ್ 15ರಂದು ಬೆಂಗಳೂರು ನಗರದಲ್ಲಿ ಅಸೋಸಿಯೇಷನ್‌ನ ಮೊದಲ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅಸೋಸಿಯೇಷನ್‌ನ ಬೈಲಾದ ಕರಡು ಪ್ರತಿ ಅನುಮೋದನೆ ಪಡೆಯಲಿದೆ ಎಂದು ತಿಳಿದು ಬಂದಿದೆ.
ಹೊಸ ಆಡಳಿತ ಮಂಡಳಿ ಘೋಷಣೆ:ಹೊಸದಾಗಿ ರಚನೆಯಾದ ರಾಜ್ಯ ಕಂಬಳ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಬೆಳಪು ದೇವಿಪ್ರಸಾದ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. ಉಪಾಧ್ಯಕ್ಷರಾಗಿ ನವೀನ್‌ಚಂದ್ರ ಆಳ್ವ ತಿರುವೈಲುಗುತ್ತು (ವಾಮಂಜೂರು), ಕಾರ್ಯದರ್ಶಿಯಾಗಿ ವಿಜಯ ಕುಮಾರ್ ಕಂಗಿನಮನೆ (ಕಾರ್ಕಳ) ಹಾಗೂ ಕೋಶಾಧಿಕಾರಿಯಾಗಿ ಲೋಕೇಶ್ ಶೆಟ್ಟಿ (ಮುಚ್ಚೂರು) ಅವರನ್ನು ನೇಮಿಸಲಾಗಿದೆ.


