ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ಕಾಂಗ್ರೆಸ್ ಮುಖಂಡ ಹಾಗೂ ಉದಯೋನ್ಮುಖ ರಾಜಕಾರಣಿ ಗೋಪಾಲಕೃಷ್ಣ ನಾಯಕ ಅವರ ಮೇಲೆ ನಡೆದ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗುತ್ತಿದೆ. ಬುಧವಾರ ಅಂಕೋಲಾ ಪಟ್ಟಣದಲ್ಲಿ ಹಾಡುಹಗಲೇ ನಡೆದ ಈ ಮಾರಣಾಂತಿಕ ದಾಳಿ ರಾಜ್ಯಾದ್ಯಂತ ಆತಂಕ ಮೂಡಿಸಿತ್ತು.
ಘಟನೆಯ ದಿನವೇ ಮಾಜಾಳಿ ಚೆಕ್ಪೋಸ್ಟ್ನಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಶುಕ್ರವಾರ ಬೆಳಗಾವಿಯಲ್ಲಿ ಇನ್ನೆರಡು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನೂ ಪ್ರಮುಖ ಆರೋಪಿ ‘ಇಮಾಮ್’ಗಾಗಿ ವ್ಯಾಪಕ ಶೋಧ ಮುಂದುವರಿದಿದೆ.
ಪೊಲೀಸರ ತನಿಖೆ ಪ್ರಕಾರ, ಈ ದಾಳಿ ಪೂರ್ವನಿಯೋಜಿತವಾಗಿದ್ದು, ಗೋವಾದಲ್ಲಿ ಒಂಬತ್ತು ಜನರು ಸೇರಿ ಗುಪ್ತ ಸಭೆ ನಡೆಸಿ ದಾಳಿಗೆ ಸ್ಕೆಚ್ ಹಾಕಿರುವುದು ಬಹಿರಂಗವಾಗಿದೆ. ಬಂಧಿತರ ಹೇಳಿಕೆ ಪ್ರಕಾರ, ಐವರು ‘ಇಮಾಮ್’ ಗ್ಯಾಂಗ್ನವರಾಗಿದ್ದು, ಉಳಿದ ಮೂವರು ಅಪರಿಚಿತರಾಗಿದ್ದಾರೆ. ಈ ಮೂವರ ಪತ್ತೆಯಾಗದಿರುವುದು ಪ್ರಕರಣಕ್ಕೆ ಹೊಸ ಕುತೂಹಲಕಾರಿ ತಿರುವು ನೀಡಿದೆ.
ಇಮಾಮ್ ಎಂಬಾತನೇ ಈ ಗ್ಯಾಂಗ್ನ ಪ್ರಮುಖ ಕಿಂಗ್ಪಿನ್ ಆಗಿದ್ದು, ದಾಳಿಗೆ ಬಳಸಲಾದ ವ್ಯಕ್ತಿಗಳಿಗೆ ಮದ್ಯ, ಮಾದಕ ವಸ್ತು ಹಾಗೂ ಊಟ ಒದಗಿಸಿ, ಗುರಿಯ ಕುರಿತು ಸ್ಪಷ್ಟ ಮಾಹಿತಿ ನೀಡದೆ ಕೇವಲ ಸೂಚನೆಗಳ ಆಧಾರದ ಮೇಲೆ ದಾಳಿ ನಡೆಸುವಂತೆ ಪ್ರೇರೇಪಿಸಿದ್ದಾನೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಬಂಧಿತರಲ್ಲಿ ಒಬ್ಬನು ನೇರವಾಗಿ ಮಾರಕಾಸ್ತ್ರದಿಂದ ಗೋಪಾಲಕೃಷ್ಣ ನಾಯಕರ ಮೇಲೆ ಹಲ್ಲೆ ನಡೆಸಿದರೆ, ಉಳಿದವರು ಸಹಾಯಕರಾಗಿ ಕಾರ್ಯನಿರ್ವಹಿಸಿರುವುದು ತಿಳಿದುಬಂದಿದೆ. ಬೆಳಗಾವಿಯಲ್ಲಿ ಬಂಧಿಸಲಾದ ಆರೋಪಿಗಳು ದಾಳಿಗೆ ನೇರ ಅಥವಾ ಪರೋಕ್ಷವಾಗಿ ಸಾಥ್ ನೀಡಿದವರು ಎಂದು ಪೊಲೀಸರು ತಿಳಿಸಿದ್ದಾರೆ.
ಇದಲ್ಲದೆ, ‘ಬಾಕ್ಸರ್’ ಎಂದು ಕರೆಯಲ್ಪಡುವ ವ್ಯಕ್ತಿಯೂ ಪೊಲೀಸರ ಬಲೆಗೆ ಸಿಕ್ಕಿರುವ ಸಾಧ್ಯತೆ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದ್ದು, ಆತ ಸಿಕ್ಕರೆ ಹತ್ಯೆ ಯತ್ನದ ಮೂಲ ಕಾರಣ ಬಹಿರಂಗವಾಗುವ ಸಾಧ್ಯತೆ ಇದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳಿಗೆ ಸಂಪರ್ಕ ಸಿಕ್ಕಿರುವ ಬಗೆ ಕುರಿತು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಯ ನಂತರ ಪರಾರಿಯಾದ ಆರೋಪಿಗಳಿಗೆ ಹಣ ನೀಡುತ್ತಿರುವ ವಿಡಿಯೋ ವೈರಲ್ ಆಗಿರುವುದು ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ್ದು, ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಮುಂದುವರಿಸಲಾಗಿದೆ.
ಗೃಹಸಚಿವರ ಆಪ್ತರಾಗಿರುವ ಗೋಪಾಲಕೃಷ್ಣ ನಾಯಕ ಗಂಭೀರ ಗಾಯಗೊಂಡಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆತ್ಮೀಯನ ಸಹಾಯದಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ದಾಳಿ ರಾಜಕೀಯ ವೈಷಮ್ಯ, ವೈಯಕ್ತಿಕ ವೈರುತ್ವ ಅಥವಾ ಹಣದ ಲಾಲಸೆಯಿಂದ ನಡೆದ ಸುಪಾರಿ ಹತ್ಯೆಯ ಯತ್ನವೇ ಎಂಬುದರ ಕುರಿತು ತನಿಖೆ ಮುಂದುವರಿದಿದ್ದು, ಶೀಘ್ರದಲ್ಲೇ ಸತ್ಯ ಹೊರಬರುವ ನಿರೀಕ್ಷೆಯಿದೆ.
ಒಟ್ಟಿನಲ್ಲಿ, ಅಂತಾರಾಜ್ಯ ಸಂಪರ್ಕ, ಸಂಚು ಹಾಗೂ ಸುಪಾರಿ ಅಂಶಗಳನ್ನು ಒಳಗೊಂಡ ಗಂಭೀರ ಅಪರಾಧ ಪ್ರಕರಣವಾಗಿ ಪೊಲೀಸರು ಪರಿಗಣಿಸಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಈ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದೆ.
