ಕರಾವಳಿ ವಾಯ್ಸ್ ನ್ಯೂಸ್

ಕುಮಟಾ: ಪಟ್ಟಣದ ಕೆಎಸ್‌ಆರ್‌ಟಿಸಿ ಡಿಪೊ ಕ್ರಾಸ್ ಬಳಿ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗೂಡ್ಸ ವಾಹನ(ಇಚರ್) ರಿಕ್ಷಾ ಹಾಗೂ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಡಿಕ್ಕಿಯ ತೀವ್ರತೆಗೆ ಬೈಕ್ ಸಮೇತ ಇಬ್ಬರು ಸವಾರರು ಈಚರ ವಾಹನದ ಅಡಿಯಲ್ಲಿ ಸಿಲುಕಿದ್ದು, ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಗಾಯಗೊಂಡವರನ್ನು ಕೊಪ್ಪಳಕರವಾಡಿಯ ಗಣನಾಥ ನರಸಿಂಹ ಪ್ರಭು (ಅಂದಾಜು 60) ಹಾಗೂ ಮಿರ್ಜಾನಿನ ರಿಹಾನ ಸೈಯದ (ಅಂದಾಜು 26) ಎಂದು ಗುರುತಿಸಲಾಗಿದೆ. ಇಬ್ಬರೂ ಬೈಕ್‌ನಲ್ಲಿ ಸಂಚರಿಸುತ್ತಿದ್ದರು ಎನ್ನಲಾಗಿದೆ.

ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಡಿಪೊ ಕ್ರಾಸ್ ಬಳಿ ಹೊನ್ನಾವರ ಕಡೆಗೆ ತೆರಳುತ್ತಿದ್ದ ಈಚರ ವಾಹನ ನಿಯಂತ್ರಣ ತಪ್ಪಿ ಮೊದಲು ರಿಕ್ಷಾಕ್ಕೆ ಡಿಕ್ಕಿ ಹೊಡೆದು ಬಳಿಕ ಬೈಕ್‌ಗೆ ಗುದ್ದಿದೆ. ಪರಿಣಾಮವಾಗಿ ಬೈಕ್ ಸಂಪೂರ್ಣವಾಗಿ ವಾಹನದ ಕೆಳಗೆ ಸಿಲುಕಿದ್ದು, ಸವಾರರು ಹೊರಬರಲಾಗದೆ ಸಂಕಷ್ಟಕ್ಕೆ ಒಳಗಾದರು.

ಘಟನೆಯ ಮಾಹಿತಿ ತಿಳಿದ ತಕ್ಷಣ ಕುಮಟಾ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಕ್ರೆನ್ ಹಾಗೂ ಸಾರ್ವಜನಿಕರ ಸಹಕಾರದಿಂದ ಈಚರ ವಾಹನವನ್ನು ಎತ್ತಿ, ಅದರ ಕೆಳಗೆ ಸಿಲುಕಿದ್ದ ಇಬ್ಬರು ಬೈಕ್ ಸವಾರರನ್ನು ಹೊರತೆಗೆಯಲಾಯಿತು. ಗಾಯಗೊಂಡವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಅಪಘಾತದ ಪರಿಣಾಮ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪೊಲೀಸರು ವಾಹನ ಸಂಚಾರವನ್ನು ನಿಯಂತ್ರಿಸಿದರು. ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.

 

 

Please Share: