ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಗುಹೆಯಲ್ಲಿ ಅವಧಿ ಮೀರಿ ವಾಸವಾಗಿದ್ದ ರಷ್ಯಾ ಮೂಲದ ಮಹಿಳೆ ಮತ್ತು ಇಬ್ಬರು ಮಕ್ಕಳಿಗೆ ತವರೂರು ಮರಳಲು ಅಗತ್ಯ ದಾಖಲೆಗಳನ್ನು ಒದಗಿಸಲು ಹೈಕೋರ್ಟ್ ಕೇಂದ್ರ ಸರಕಾರಕ್ಕೆ ಶುಕ್ರವಾರ ಸೂಚನೆ ನೀಡಿದೆ.
ಮಕ್ಕಳ ತಂದೆ ಡ್ರೋರ್ ಶ್ಲೋಮೋ ಗೋಲ್ಡಸ್ಟೈನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ಪೀಠ, “ಮಹಿಳೆ ಮತ್ತು ಮಕ್ಕಳು ವೀಸಾ ಅವಧಿ ಮೀರಿ ಭಾರತದಲ್ಲಿ ನೆಲೆಸಿದ್ದಾರೆ. ತಾಯಿ ಸ್ವತಃ ಮಕ್ಕಳೊಂದಿಗೆ ರಷ್ಯಾಗೆ ಹಿಂದಿರುಗಲು ವಿನಂತಿಸಿದ್ದು, ರಷ್ಯಾ ಸರಕಾರವೂ ಅವರನ್ನು ವಾಪಸ್ ಕರೆತರಲು ಒಪ್ಪಿದೆ. ಆದ್ದರಿಂದ ತುರ್ತು ಪ್ರಯಾಣಕ್ಕೆ ಅಗತ್ಯವಿರುವ ದಾಖಲೆಗಳನ್ನು ಕೇಂದ್ರ ಸರಕಾರ ಒದಗಿಸಬೇಕು,” ಎಂದು ಆದೇಶಿಸಿದೆ.
ವಿಚಾರಣೆ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, “ಮಗುವಿನ ಡಿಎನ್ಎ ವರದಿ ಪರಿಶೀಲಿಸಿದ ಬಳಿಕ ರಷ್ಯಾ ಸರಕಾರಕ್ಕೆ ಮಾಹಿತಿ ನೀಡಲಾಗಿದೆ. ಅವರು ತುರ್ತು ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿರುವುದರಿಂದ, ತಾಯಿ–ಮಕ್ಕಳಿಗೆ ನಿರ್ಗಮನ ಪರವಾನಗಿ ನೀಡಬೇಕು,” ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಅರ್ಜಿದಾರರ ಪರ ವಕೀಲರು, “ಅರ್ಜಿದಾರರು ಎರಡನೇ ಮಗುವಿಗೆ ಮಾತ್ರ ಜವಾಬ್ದಾರರಾಗಿದ್ದರೂ, ತಾಯಿ ಇಬ್ಬರೂ ಮಕ್ಕಳನ್ನು ದೀರ್ಘಕಾಲದಿಂದ ನೋಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಎಲ್ಲರನ್ನೂ ಸೇರಿ ರಷ್ಯಾಗೆ ಕಳುಹಿಸಬೇಕು,” ಎಂದು ಮನವಿ ಸಲ್ಲಿಸಿದರು.
ಈ ಕುರಿತು ಹೈಕೋರ್ಟ್ ತಾಯಿ ಮತ್ತು ಮಕ್ಕಳ ಹಿತಾಸಕ್ತಿಯನ್ನು ಪರಿಗಣಿಸಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.


