ಬೆಂಗಳೂರು: ರಾಜ್ಯ ಆರೋಗ್ಯ ಇಲಾಖೆ ಮಕ್ಕಳ ಆರೋಗ್ಯದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾಫ್ ಸಿರಪ್ (ಕೆಮ್ಮಿನ ಸಿರಪ್) ಬಳಕೆಯ ಕುರಿತು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮು ಅಥವಾ ಶೀತದ ಸಿರಪ್ ನೀಡುವುದು ಅಪಾಯಕಾರಿಯಾಗಿದೆ ಎಂದು ಇಲಾಖೆ ಸ್ಪಷ್ಟ ಎಚ್ಚರಿಕೆ ನೀಡಿದೆ.
ಮಾರ್ಗಸೂಚಿಯ ಪ್ರಕಾರ, ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶಿಶುಗಳಿಗೆ ಯಾವುದೇ ರೀತಿಯ ಕೆಮ್ಮು ಅಥವಾ ಶೀತದ ಸಿರಪ್ ನೀಡಬಾರದು. ಎರಡುರಿಂದ ಐದು ವರ್ಷದೊಳಗಿನ ಮಕ್ಕಳಿಗೆ ಮಾತ್ರ ಸರಿಯಾದ ವೈದ್ಯಕೀಯ ಪರೀಕ್ಷೆಯ ನಂತರ, ತಜ್ಞ ವೈದ್ಯರ ನಿರ್ದಿಷ್ಟ ಸಲಹೆಯ ಮೇರೆಗೆ ಮಾತ್ರ ಈ ಔಷಧಿಗಳನ್ನು ನೀಡಬೇಕು. ಐದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೂ ವೈದ್ಯರ ಸಲಹೆಯಂತೆ ಮಾತ್ರ ಸಿರಪ್ ಬಳಸಬೇಕೆಂದು ಸೂಚಿಸಲಾಗಿದೆ.
ಅದೇ ವೇಳೆ, ಸಾಧ್ಯವಾದಷ್ಟು ಕಡಿಮೆ ಅವಧಿಗೆ ಕನಿಷ್ಠ ಪ್ರಮಾಣದ ಡೋಸ್ ನೀಡುವುದು ಸೂಕ್ತವೆಂದು ಆರೋಗ್ಯ ಇಲಾಖೆ ತಿಳಿಸಿದೆ. ಬಹು ಔಷಧಗಳ ಸಂಯೋಜನೆ ಇರುವ ಸಿರಪ್‌ಗಳನ್ನು ಬಳಸಬಾರದು ಮತ್ತು ಸ್ವಯಂ ಔಷಧೋಪಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವೈದ್ಯರ ಸೂಚನೆ ಇಲ್ಲದೆ ಔಷಧಿ ಖರೀದಿಸುವುದು ಅಥವಾ ಬಳಸುವುದು ತಪ್ಪು ಕ್ರಮವಾಗಿದ್ದು, ಇದರಿಂದ ಮಕ್ಕಳ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.
ಈ ಹಿಂದೆ ಬಳಸಿದ ಸಿರಪ್ ಉಳಿದಿದ್ದರೆ ಅದನ್ನು ಮತ್ತೆ ಬಳಸಬಾರದು ಹಾಗೂ ಅವಧಿ ಮುಗಿದ ಔಷಧಿಯನ್ನು ನೀಡುವುದು ಅತ್ಯಂತ ಅಪಾಯಕಾರಿ ಎಂದು ಇಲಾಖೆ ಸ್ಪಷ್ಟಪಡಿಸಿದೆ. ವೈದ್ಯರಲ್ಲದವರು ಶಿಫಾರಸ್ಸು ಮಾಡುವ ಔಷಧಗಳನ್ನು ಮಕ್ಕಳಿಗೆ ನೀಡಬಾರದು ಎಂದು ಇಲಾಖೆ ಪೋಷಕರಿಗೆ ಮನವಿ ಮಾಡಿದೆ.
ಮಕ್ಕಳ ಸುರಕ್ಷತೆಯನ್ನು ಕಾಪಾಡಲು ಪೋಷಕರು, ಆರೈಕೆದಾರರು ಹಾಗೂ ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.


