ಬೆಂಗಳೂರು: ಕರ್ನಾಟಕ ಕಟ್ಟಡ ನಿರ್ಮಾಣ ಹಾಗೂ ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯು ನೋಂದಾಯಿತ ಕಟ್ಟಡ ಕಾರ್ಮಿಕರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ “ಅಂತ್ಯಸಂಸ್ಕಾರ ಪರಿಹಾರ ಯೋಜನೆ”ಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಕಾರ್ಮಿಕರ ಮರಣದ ನಂತರ ಅವರ ಕುಟುಂಬಕ್ಕೆ ನೇರ ಆರ್ಥಿಕ ಸಹಾಯ ದೊರೆಯಲಿದೆ.

ರಾಜ್ಯ ಸರ್ಕಾರದ ಪ್ರಕಟಣೆಯ ಪ್ರಕಾರ, 2025ರ ಜುಲೈ 16ರ ನಂತರ ಮೃತಪಟ್ಟ ನೋಂದಾಯಿತ ಕಟ್ಟಡ ಕಾರ್ಮಿಕರ ಕುಟುಂಬಕ್ಕೆ ಅಂತ್ಯಸಂಸ್ಕಾರ ವೆಚ್ಚವಾಗಿ ₹4,000 ಹಾಗೂ ಪರಿಹಾರ ಧನವಾಗಿ ₹1.46 ಲಕ್ಷ, ಒಟ್ಟಿನಲ್ಲಿ ₹1.50 ಲಕ್ಷ ರೂಪಾಯಿ ನೀಡಲಾಗುತ್ತದೆ. ಆದರೆ, ಕಾರ್ಮಿಕನ ಮರಣವು ಈ ದಿನಾಂಕಕ್ಕಿಂತ ಮೊದಲು ಸಂಭವಿಸಿದರೆ, ಅವರ ಕುಟುಂಬಕ್ಕೆ ಹಳೆಯ ಮೊತ್ತವಾದ ₹75 ಸಾವಿರ ಪರಿಹಾರ ದೊರೆಯಲಿದೆ.

ಈ ಯೋಜನೆಯ ಪ್ರಯೋಜನ ಪಡೆಯಲು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಾಗಿರಬೇಕು. ಮೃತ ಕಾರ್ಮಿಕರ ಹೆಸರಿನಲ್ಲಿ ನಾಮಿನಿಯಾಗಿ ಉಲ್ಲೇಖಿಸಿರುವವರು ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ. ಮರಣದ ಸಮಯದಲ್ಲಿ ಕಾರ್ಮಿಕನ ನೋಂದಣಿ ಸಕ್ರಿಯವಾಗಿರುವುದು ಕಡ್ಡಾಯವಾಗಿದೆ.

ಅರ್ಜಿಯು ಮಾನ್ಯವಾಗಲು ಕಾರ್ಮಿಕರ ಗುರುತಿನ ಚೀಟಿ ಅಥವಾ ನೋಂದಣಿ ಸಂಖ್ಯೆ, ಮರಣ ಪ್ರಮಾಣಪತ್ರ ಮತ್ತು ಇತರೆ ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಇದರಲ್ಲಿ ಉದ್ಯೋಗದಾತರಿಂದ ನೀಡಿದ ಪ್ರಮಾಣಪತ್ರ, ಫಲಾನುಭವಿ ಅಥವಾ ನಾಮಿನಿಯ ಬ್ಯಾಂಕ್ ಪಾಸ್‌ಬುಕ್, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಉದ್ಯೋಗ ಪ್ರಮಾಣಪತ್ರ ಮತ್ತು ಭಾವಚಿತ್ರ ಕೂಡ ಸೇರಿವೆ.

ಅರ್ಜಿದಾರರು ಫಾರ್ಮ್ 18 ಅನ್ನು ಭರ್ತಿ ಮಾಡಿ ಸಂಬಂಧಿಸಿದ ಇಲಾಖೆಗೆ ಸಲ್ಲಿಸಬೇಕಾಗುತ್ತದೆ. ಮರಣ ಸಂಭವಿಸಿದ ದಿನಾಂಕದಿಂದ ಒಂದು ವರ್ಷದೊಳಗೆ ಮಾತ್ರ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ. ಈ ಅವಧಿಯೊಳಗೆ ಅರ್ಜಿ ಸಲ್ಲಿಸದಿದ್ದಲ್ಲಿ ಪರಿಹಾರ ಸಿಗುವುದಿಲ್ಲ.

ಈ ಯೋಜನೆಯ ಪ್ರಯೋಜನ ಪಡೆಯಲು ಮೊದಲ ಕಾರ್ಮಿಕರು ಮಂಡಳಿಯ ಅಧಿಕೃತ ವೆಬ್‌ಸೈಟ್‌ https://kbocwwb.karnataka.gov.in/login ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ OTP ಮೂಲಕ ದೃಢೀಕರಿಸಿದ ನಂತರ ಅಗತ್ಯ ಮಾಹಿತಿಗಳನ್ನು ತುಂಬಿ ನೋಂದಣಿ ಪೂರ್ಣಗೊಳಿಸಬಹುದು.

 

 

 

 

 

Please Share: