ಕರಾವಳಿ ವಾಯ್ಸ್ ನ್ಯೂಸ್
ಮುರಡೇಶ್ವರ: ರಾತ್ರಿಯ ವೇಳೆ ರೈಲು ನಿಲ್ದಾಣದ ಬಳಿ ಸ್ಕೂಟರ್ನಲ್ಲಿ ತೆರಳುತ್ತಿದ್ದ ವ್ಯಕ್ತಿಯ ಚಿನ್ನದ ಸರ ಕಿತ್ತು ಪರಾರಿಯಾದ ನಾಲ್ವರು ಮಂಗಳಮುಖಿಯರನ್ನು ಮುರಡೇಶ್ವರ ಪೊಲೀಸರು ಚುರುಕಾದ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಪ್ರವಾಸಕ್ಕಾಗಿ ಮುರಡೇಶ್ವರಕ್ಕೆ ಬಂದಿದ್ದ ಮೈಸೂರು ಮೂಲದ ನಾಲ್ವರು ಮಂಗಳಮುಖಿಯರು ಈ ದರೋಡೆ ಎಸಗಿದ್ದು, ಅವರಲ್ಲಿ ಒಬ್ಬಳು ಅಪ್ರಾಪ್ತೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಮಾಹಿತಿಯ ಪ್ರಕಾರ, ರೈಲು ಸಿಗದ ಕಾರಣ ರಾತ್ರಿ ತಮ್ಮ ವಸತಿಗೃಹಕ್ಕೆ ಹಿಂದಿರುಗುತ್ತಿದ್ದ ಮಂಗಳಮುಖಿಯರು ರಾತ್ರಿ ಸುಮಾರು 10.30ರ ಸುಮಾರಿಗೆ ಮುರಡೇಶ್ವರ ರೈಲು ನಿಲ್ದಾಣದ ಸಮೀಪ ಸ್ಕೂಟರ್ನಲ್ಲಿ ತೆರಳುತ್ತಿದ್ದ ಆರ್ಎನ್ಎಸ್ ಡಿಪ್ಲೋಮಾ ಕಾಲೇಜಿನ ಸಿಬ್ಬಂದಿ ಹಾಗೂ ಮಾವಳ್ಳಿ- ಗುಮ್ಮನಹಕ್ಕಲ್ ಮೂಲದ ಅರುಣಕುಮಾರ ಭಾಸ್ಕರ ನಾಯ್ಕ ಅವರನ್ನು ತಡೆದು, ಮೈಮೇಲೆ ಕೈ ಹಾಕಿ ಕುತ್ತಿಗೆಗೆ ಹಾಕಿದ್ದ ಚಿನ್ನದ ಸರ ಕಿತ್ತು ಪರಾರಿಯಾದರು.
ಘಟನೆಯ ಬಗ್ಗೆ ಮುರಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಚುರುಕಾಗಿ ತನಿಖೆ ಕೈಗೊಂಡು ನಾಲ್ವರು ಮಂಗಳಮುಖಿಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅವರ ವಿರುದ್ಧ ದರೋಡೆ ಪ್ರಕರಣ ದಾಖಲಿಸಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ.


