ಕರಾವಳಿ ವಾಯ್ಸ್ ನ್ಯೂಸ್
ಅಂಕೋಲಾ: ತಾಲೂಕಿನ ಮಂಜುಗುಣಿ ಕಡಲತೀರದಲ್ಲಿ ಶುಕ್ರವಾರ ಗಸ್ತು ಸಂಚರಣೆ ವೇಳೆ ಅಪರೂಪದ ಜೀವ ವೈವಿಧ್ಯ ಸಂರಕ್ಷಣೆಗೆ ಮಹತ್ವದ ಘಟನೆ ನಡೆದಿದೆ. ಕಡಲಾಮೆ (ಒಲಿವ್ ರಿಡ್ಲಿ) ಮೊಟ್ಟೆ ಇಟ್ಟಿರುವ ಗೂಡನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳೀಯ ಮೀನುಗಾರರ ಸಹಕಾರದಿಂದ ಗುರುತಿಸಿದ್ದಾರೆ.
ಇದು 2025ನೇ ಸಾಲಿನಲ್ಲಿ ಕಾರವಾರ ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ ಪತ್ತೆಯಾದ ಮೊದಲ ಕಡಲಾಮೆ ಮೊಟ್ಟೆ ಗೂಡು ಆಗಿದ್ದು, ಸಂರಕ್ಷಣಾ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.
ಮಂಜುಗುಣಿ ಕಡಲತೀರದಲ್ಲಿ ನಿತ್ಯದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಗಸ್ತು ಸಂಚರಣೆ ನಡೆಸುತ್ತಿದ್ದ ಸಂದರ್ಭದಲ್ಲೇ ಕಡಲಾಮೆ ಕಡಲತೀರಕ್ಕೆ ಬಂದು ಮೊಟ್ಟೆ ಇಟ್ಟಿರುವ ಗುರುತುಗಳು ಕಂಡುಬಂದವು. ಅನುಭವೀ ಸ್ಥಳೀಯ ಮೀನುಗಾರರು ಗುರುತುಗಳನ್ನು ಪರಿಶೀಲಿಸಿ ಇದು ಕಡಲಾಮೆಯ ಮೊಟ್ಟೆ ಗೂಡು ಎಂಬುದನ್ನು ದೃಢಪಡಿಸಿದರು. ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಅಗತ್ಯ ಕ್ರಮ ಕೈಗೊಂಡರು.
ಪತ್ತೆಯಾದ ಮೊಟ್ಟೆಗಳನ್ನು ಸ್ಥಳಾಂತರಿಸದೇ, ಅದೇ ಸ್ಥಳದಲ್ಲೇ ಇನ್‌ಸಿಟು ಕನ್ಸರ್ವೇಶನ್ ವಿಧಾನದಲ್ಲಿ ಸುರಕ್ಷಿತವಾಗಿ ಸಂರಕ್ಷಿಸಿ ಇಡಲಾಗಿದೆ. ಮೊಟ್ಟೆ ಗೂಡಿನ ಸುತ್ತಲೂ ರಕ್ಷಣಾ ಬೇಲಿ ನಿರ್ಮಿಸಿ, ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ. ಮಾನವ ಹಸ್ತಕ್ಷೇಪ, ನಾಯಿಗಳು ಹಾಗೂ ಇತರೆ ಪ್ರಾಣಿಗಳಿಂದ ಹಾನಿಯಾಗದಂತೆ ನಿರಂತರ ನಿಗಾವಹಿಸಲಾಗುತ್ತಿದೆ. ಮೊಟ್ಟೆಗಳಿಂದ ಸುಮಾರು 45ರಿಂದ 55 ದಿನಗಳೊಳಗೆ ಮರಿಗಳು ಹೊರಬಂದು ಕಡಲ ಕಡೆಗೆ ಸಾಗುವ ನಿರೀಕ್ಷೆಯಿದೆ.
ಈ ಸಂರಕ್ಷಣಾ ಕಾರ್ಯಾಚರಣೆಯಲ್ಲಿ ಕಾರವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಅಂಕೋಲಾ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ್ ಸಿ, ವಲಯ ಅರಣ್ಯಾಧಿಕಾರಿಗಳು ಪ್ರಮೋದ್ ಹಾಗೂ ಕಿರಣ್, ಕೋಸ್ಟಲ್ & ಮರೈನ್ ಇಕೋ–ಸಿಸ್ಟಮ್ ಘಟಕದ ಸಿಬ್ಬಂದಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸ್ಥಳೀಯ ಮೀನುಗಾರರು ಸಹ ಸಹಕಾರ ನೀಡಿ ಸಂರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದರು.
ಮೀನುಗಾರರಿಗೆ ಪ್ರೋತ್ಸಾಹ
ಕಡಲಾಮೆ ಮೊಟ್ಟೆ ಗೂಡು ಪತ್ತೆಗೆ ಪ್ರಮುಖ ಪಾತ್ರವಹಿಸಿದ ಸ್ಥಳೀಯ ಮೀನುಗಾರನಿಗೆ ಅರಣ್ಯ ಇಲಾಖೆಯ ವತಿಯಿಂದ ಅಂಕೋಲಾ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರೋತ್ಸಾಹ ಧನ ವಿತರಿಸಿದರು. ಕಡಲಾಮೆ ಸಂರಕ್ಷಣೆಯಲ್ಲಿ ಸ್ಥಳೀಯ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಮುಂದಿನ ದಿನಗಳಲ್ಲೂ ಸಹಕಾರ ಅಗತ್ಯವೆಂದು ಅಧಿಕಾರಿಗಳು ಮನವಿ ಮಾಡಿದರು.
ಕಡಲಾಮೆ ಸಂರಕ್ಷಣೆಯ ಮಹತ್ವ
ಒಲಿವ್ ರಿಡ್ಲಿ ಕಡಲಾಮೆ ಅಪಾಯದಲ್ಲಿರುವ ಜಾತಿಯಾಗಿದ್ದು, ಕಡಲತೀರಗಳಲ್ಲಿ ಮೊಟ್ಟೆ ಇಡುವ ಕಾಲದಲ್ಲಿ ಸೂಕ್ತ ರಕ್ಷಣೆ ಅಗತ್ಯವಾಗಿರುತ್ತದೆ. ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಂಯುಕ್ತ ಪ್ರಯತ್ನದಿಂದ ಇಂತಹ ಗೂಡುಗಳನ್ನು ರಕ್ಷಿಸಿದರೆ, ಸಮುದ್ರ ಜೀವ ವೈವಿಧ್ಯ ಉಳಿವಿಗೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ.

