ಕರಾವಳಿ ವಾಯ್ಸ್ ನ್ಯೂಸ್
ಕಾರವಾರ: ಇಲ್ಲಿನ ಕದಂಬ ನೌಕಾನೆಲೆಗೆ ಭಾನುವಾರ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತೀಯ ನೌಕಾಪಡೆಯ ‘ಐಎನ್‌ಎಸ್ ವಾಗ್ಶೀರ್’ ಜಲಾಂತರ್ಗಾಮಿ ನೌಕೆಯಲ್ಲಿ (ಸಬ್‌ಮೆರಿನ್) ಸಮುದ್ರಯಾನ ನಡೆಸಿದರು. ಈ ಮೂಲಕ ಜಲಾಂತರ್ಗಾಮಿ ನೌಕೆಯಲ್ಲಿ ಸಂಚರಿಸಿದ ದೇಶದ ಎರಡನೇ ರಾಷ್ಟ್ರಪತಿ ಹಾಗೂ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಅಪೂರ್ವ ದಾಖಲೆಗೆ ಅವರು ಪಾತ್ರರಾದರು.
ಗೋವಾದಿಂದ ಬೆಳಿಗ್ಗೆ ಸುಮಾರು 9 ಗಂಟೆಗೆ ನೌಕಾದಳದ ವಿಶೇಷ ಹೆಲಿಕಾಪ್ಟರ್ ಮೂಲಕ ಕಾರವಾರ ನೌಕಾನೆಲೆಗೆ ಬಂದಿಳಿದ ರಾಷ್ಟ್ರಪತಿಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋಟ್ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಉಪಸ್ಥಿತರಿದ್ದರು.
ನೌಕಾನೆಲೆಯಲ್ಲಿ ರಾಷ್ಟ್ರಪತಿಯನ್ನು ಪ್ರಾದೇಶಿಕ ಆಯುಕ್ತೆ ಜಯಂತಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಎಡಿಜಿಪಿ ಹಿತೇಂದ್ರ, ಐಜಿಪಿ ಅಮಿತ್ ಸಿಂಗ್, ಎಸ್ಪಿ ದೀಪನ್ ಎಂ.ಎನ್. ಸೇರಿದಂತೆ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು. ನೌಕಾಪಡೆಯ ಮುಖ್ಯಸ್ಥರಾದ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಟಿ, ಕಾರವಾರ ನೌಕಾನೆಲೆಯ ಫೀಲ್ಡ್ ಆಫೀಸರ್ ಕಮಾಂಡೆಂಟ್ ಹಾಗೂ ಕರ್ನಾಟಕ ನೌಕಾ ಪ್ರದೇಶದ ಫ್ಲಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ವಿಕ್ರಂ ಮೆನನ್, ಸೇರಿದಂತೆ ನೌಕಾಪಡೆಯ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಂತರ ಜಲಾಂತರ್ಗಾಮಿ ನೌಕೆಯ ಬಳಿ ತೆರಳಿದ ರಾಷ್ಟ್ರಪತಿ, ನೌಕಾದಳದ ಸಿಬ್ಬಂದಿಗೆ ಕೈಬೀಸುತ್ತ ‘ಐಎನ್‌ಎಸ್ ವಾಗ್ಶೀರ್’ ನೌಕೆಯೊಳಗೆ ಪ್ರವೇಶಿಸಿದರು. ಸಮುದ್ರದ ಆಳದಲ್ಲಿ ಸಬ್‌ಮೆರಿನ್ ಸಂಚರಿಸಿದ್ದು, ರಾಷ್ಟ್ರಪತಿ ತಾಸಿಗೂ ಹೆಚ್ಚು ಕಾಲ ನೌಕೆಯೊಳಗೆ ಪ್ರಯಾಣ ನಡೆಸಿದರು.
ಈ ಹಿಂದೆ ದಿವಂಗತ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರು 2006ರಲ್ಲಿ ಬಂಗಾಳಕೊಲ್ಲಿಯಲ್ಲಿ ‘ಐಎನ್‌ಎಸ್ ಸಿಂಧು ರಕ್ಷಕ್’ ಜಲಾಂತರ್ಗಾಮಿ ನೌಕೆಯಲ್ಲಿ 3.5 ಗಂಟೆಗಳ ಕಾಲ ಯಾನ ಕೈಗೊಂಡು ಮೊದಲ ರಾಷ್ಟ್ರಪತಿ ಎಂಬ ಗೌರವ ಪಡೆದಿದ್ದರು.
ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಂದ ಡಿಸೆಂಬರ್ 28ರಂದು ಮಧ್ಯಾಹ್ನ 3.30ರವರೆಗೆ ಕಾರವಾರ ಸಮುದ್ರ ತೀರದಲ್ಲಿ ಮೀನುಗಾರಿಕೆಗೆ ತಾತ್ಕಾಲಿಕ ನಿಷೇಧ ವಿಧಿಸಲಾಗಿದೆ.

