ಕರಾವಳಿ ವಾಯ್ಸ್ ನ್ಯೂಸ್
ಗೋಕರ್ಣ: ಬಂಗ್ಲೆಗುಡ್ಡ ಪ್ರದೇಶದಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಸಿಲಿಂಡರ್ ಭಾರೀ ಸ್ಪೋಟಗೊಂಡು ಒಂದು ಮನೆ ಸಂಪೂರ್ಣವಾಗಿ ನಾಶಗೊಂಡ ಘಟನೆ ಆತಂಕ ಮೂಡಿಸಿದೆ.
ಬೆಳಿಗ್ಗೆಯ ಸಮಯದಲ್ಲಿ ಮನೆಯ ಒಳಗಿನಿಂದ ದಟ್ಟ ಹೊಗೆ ಮತ್ತು ಚಿಡಿಚಿಡಿ ಶಬ್ದಗಳು ಕೇಳಿಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಓಡಿಬಂದಿದ್ದಾರೆ. ಕ್ಷಣಗಳಲ್ಲೇ ಗ್ಯಾಸ್ ಸಿಲಿಂಡರ್ ಸಿಡಿದು ಭಾರೀ ಸ್ಪೋಟ ಉಂಟಾಗಿದ್ದು, ಮನೆಯ ಮೇಲ್ಚಾವಣಿ, ಗೋಡೆಗಳು ಸೇರಿದಂತೆ ಆವರಣದ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿ ಹೋಗಿವೆ.
ಸ್ಫೋಟದ ತೀವ್ರತೆ ಎಷ್ಟು ಹೆಚ್ಚಿನಿತ್ತಂದರೆ, ಬೆಂಕಿ ಸಮೀಪದ ಕಾಡು ಪ್ರದೇಶಕ್ಕೂ ವ್ಯಾಪಿಸಿದೆ. ಅರಣ್ಯಕ್ಕೆ ಬೆಂಕಿ ತಗುಲಿರುವುದು ಪರಿಸರ ಪ್ರೇಮಿಗಳಲ್ಲಿ ಗಂಭೀರ ಚಿಂತನೆ ಮೂಡಿಸಿದೆ.
ಸೌಭಾಗ್ಯವಶಾತ್, ಘಟನೆ ಸಂಭವಿಸಿದ ಸಮಯದಲ್ಲಿ ಮನೆಯಲ್ಲಿದ್ದು ಯಾರು ಇರಲಿಲ್ಲ. ಇದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬದವರು ಬೆಳ್ಳಿಗ್ಗೆ ಬೇಗನೆ ಹೊರಗಡೆ ಕೆಲಸಕ್ಕೆ ತೆರಳಿದ್ದ ಕಾರಣ ಮಾನವೀಯ ಪ್ರಾಣಾಪಾಯ ತಪ್ಪಿದೆ.
ಘಟನೆ ತಿಳಿಯುತ್ತಿದ್ದಂತೆಯೇ ಕುಮಟಾದಿಂದ ಅಗ್ನಿಶಾಮಕ ದಳದ ವಾಹನ ಸ್ಥಳಕ್ಕೆ ಧಾವಿಸಿತು. ಸುಮಾರು ಒಂದು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ತರಲಾಯಿತು. ಕಾಡಿನಲ್ಲಿ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನೂ ನಿಗ್ರಹಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾದರು.
ಘಟನಾ ಸ್ಥಳಕ್ಕೆ ಗೋಕರ್ಣ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ಗ್ಯಾಸ್ಸ್ ಲೀಕೆಜ್‌ನಿಂದ ಬೆಂಕಿ ಪ್ರಾರಂಭವಾಗಿ ನಂತರ ಸಿಲಿಂಡರ್ ಸ್ಫೋಟಗೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಸ್ಥಳೀಯರು ಬೆಂಕಿ ಅವಘಡದ ತೀವ್ರತೆಗೆ ಬೆಚ್ಚಿಬಿದ್ದಿದ್ದು, ಅಧಿಕಾರಿಗಳು ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರೆಸಿದ್ದಾರೆ.

