ಕರಾವಳಿ ವಾಯ್ಸ್ ನ್ಯೂಸ್
ಶಿರಸಿ: ಪರೀಕ್ಷೆ ಸಮಯದಲ್ಲಿ ಸರಿಯಾಗಿ ಓದುತ್ತಿಲ್ಲ ಎಂದು ತಂದೆ ಬುದ್ಧಿವಾದ ಹೇಳಿ ಒಂದೆರಡು ಏಟು ಹೊಡೆದಿದ್ದರಿಂದ ಸಿಟ್ಟುಗೊಂಡ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಮನೆಬಿಟ್ಟು ಓಡಿಹೋಗಿ ನಾಪತ್ತೆಯಾಗಿರುವ ಘಟನೆ ತಾಲೂಕಿನ ಮಣಜವಳ್ಳಿ ಪೋಸ್ಟ್ ವ್ಯಾಪ್ತಿಯ ಗಣೇಶನಗರದಲ್ಲಿ ನಡೆದಿದೆ.
ಕಾಣೆಯಾಗಿರುವ ವಿದ್ಯಾರ್ಥಿಯನ್ನು 18 ವರ್ಷದ ಅನಿಲ ರಾಜು ಭೋವಿವಡ್ಡರ ಎಂದು ಗುರುತಿಸಲಾಗಿದೆ. ಈ ಕುರಿತು ಆತನ ತಂದೆ, ವೃತ್ತಿಯಲ್ಲಿ ಗೌಂಡಿ ಕೆಲಸ ಮಾಡುವ 47 ವರ್ಷದ ರಾಜು ಬಸವಣೆಪ್ಪ ಭೋವಿವಡ್ಡರ ಅವರು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅನಿಲ ಶಿರಸಿಯ ಮಾರಿಗುಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದನು. ಮೊದಲಿನಿಂದಲೂ ಚೆನ್ನಾಗಿ ಓದುತ್ತಿದ್ದ ಈತ, ಇತ್ತೀಚೆಗೆ ವಿದ್ಯಾಭ್ಯಾಸದ ಕಡೆ ಗಮನ ಹರಿಸುತ್ತಿರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮಂಗಳವಾರ ರಂದು ಬೆಳಿಗ್ಗೆ 8:45ಕ್ಕೆ ಪರೀಕ್ಷೆ ಬರೆಯಲು ಹೋಗಿದ್ದ ಅನಿಲ ಮಧ್ಯಾಹ್ನ 2 ಗಂಟೆಗೆ ಮನೆಗೆ ವಾಪಸ್ಸಾಗಿದ್ದನು. ಪರೀಕ್ಷೆಗಳು ನಡೆಯುತ್ತಿದ್ದರೂ ಸರಿಯಾಗಿ ಓದದೆ ಇರುವುದನ್ನು ಗಮನಿಸಿದ ತಂದೆ ರಾಜು ಅವರು “ಸರಿಯಾಗಿ ಓದಲಿಕ್ಕೆ ಆಗಲ್ವಾ?” ಎಂದು ಬೈದು, ಹೆದರಿಸುವ ಉದ್ದೇಶದಿಂದ ಒಂದೆರಡು ಏಟು ಹೊಡೆದಿದ್ದರು ಎನ್ನಲಾಗಿದೆ.
ಈ ಕಾರಣದಿಂದ ಕೋಪಗೊಂಡ ಅನಿಲ, ಅದೇ ದಿನ ರಾತ್ರಿ ಸುಮಾರು 9:45ರ ಸುಮಾರಿಗೆ ಕೈಯಲ್ಲಿದ್ದ ಪುಸ್ತಕವನ್ನು ಬಿಸಾಡಿ “ನಾನು ಎಲ್ಲಿಯಾದರೂ ಹೋಗುತ್ತೇನೆ” ಎಂದು ಹೇಳಿ ಮನೆಯಿಂದ ಹೊರಟುಹೋಗಿದ್ದಾನೆ. ಬಳಿಕ ಕುಟುಂಬಸ್ಥರು ಸುತ್ತಮುತ್ತ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.
ಬುಧವಾರ ರಂದು ತಂದೆ ರಾಜು ಅವರು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ವಿದ್ಯಾರ್ಥಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
