ಕರಾವಳಿ ವಾಯ್ಸ್ ನ್ಯೂಸ್

ಮುಂಡಗೋಡ: ಕನ್ನಡ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಡೆವಿಲ್’ ಚಲನಚಿತ್ರ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ನಿರ್ಮಿಸಿರುವ ಈ ಸಿನಿಮಾ ನೋಡಿಕೊಂಡು ಮನೆಗೆ ಮರಳುತ್ತಿದ್ದಾಗಲೇ ತಾಲೂಕಿನ ತಡಸ ಸಮೀಪದ ತಾಯವ್ವನ ಗುಡಿಯ ಬಳಿ ಭೀಕರ ಕಾರು ಅಪಘಾತ ಸಂಭವಿಸಿ ಒಂದು ಕುಟುಂಬಕ್ಕೆ ತೀವ್ರ ದುಃಖ ತಂದಿದೆ.

ಹುಬ್ಬಳ್ಳಿಯ ಚಿತ್ರಮಂದಿರದಲ್ಲಿ ‘ಡೆವಿಲ್’ ಸಿನಿಮಾ ವೀಕ್ಷಿಸಿ ವಾಪಸ್ಸಾಗುತ್ತಿದ್ದ ಮುಂಡಗೋಡ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಗೋಪಾಲ ಅವರು ಸೇರಿ ಮೂವರು ಪ್ರಯಾಣಿಸುತ್ತಿದ್ದ ಕಾರು, ಕಳೆದ ರಾತ್ರಿ ಸುಮಾರು 7.30 ಗಂಟೆಯ ವೇಳೆಗೆ ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಮುಂಡಗೋಡದ ಶಾನುಭೋಗರಾಗಿದ್ದ ಗೋಪಾಲ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಾತ್ರಿ ಸಾಕಷ್ಟು ಸಮಯವಾದರೂ ಗೋಪಾಲ ಅವರು ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಅಧಿಕಾರಿಗಳು ಹುಡುಕಾಟ ನಡೆಸಿದ್ದರು. ಇಂದು ಬೆಳಗಿನ ಜಾವ ಸುಮಾರು 2 ಗಂಟೆಯ ವೇಳೆಗೆ ತಡಸ ಸಮೀಪ ಅಪಘಾತಕ್ಕೊಂಡು ಬಿದ್ದ ಕಾರು ಪತ್ತೆಯಾಗುತ್ತಿದ್ದಂತೆ ದುರ್ಘಟನೆಯ ಸತ್ಯ ಬೆಳಕಿಗೆ ಬಂದಿದೆ.

ಗೋಪಾಲ ಅವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗೋವಿಂದ ಹಾಗೂ ಮಂಜುನಾಥ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ನಿಖರ ಕಾರಣ ತಿಳಿಯಲು ತನಿಖೆ ಆರಂಭಿಸಿದ್ದಾರೆ. ಅತಿವೇಗ ಅಥವಾ ಚಾಲಕನ ನಿಯಂತ್ರಣ ತಪ್ಪಿರುವುದೇ ಅಪಘಾತಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.

ಸರಕಾರಿ ಸೇವೆಯಲ್ಲಿ ನಿಷ್ಠಾವಂತ ಹಾಗೂ ಉತ್ತಮ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಗೋಪಾಲ ಅವರ ಅಕಾಲಿಕ ನಿಧನಕ್ಕೆ ಮುಂಡಗೋಡ ತಹಶೀಲ್ದಾರ್ ಕಚೇರಿ ಸಿಬ್ಬಂದಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಗಲಿಕೆಯಿಂದ ಇಲಾಖೆಗೂ ಹಾಗೂ ಪ್ರದೇಶಕ್ಕೂ ತುಂಬಲಾರದ ನಷ್ಟವಾಗಿದೆ ಎಂದು ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ.

 

Please Share: