ಕರಾವಳಿ ವಾಯ್ಸ್ ನ್ಯೂಸ್
ಭಟ್ಕಳ: ಸಾಮಾಜಿಕ ಮಾಧ್ಯಮದ ದುರಪಯೋಗ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಹೊನ್ನಾವರದ ತೇಜು ನಾಯ್ಕ ಮತ್ತು ವಂದನಾ ಪೂಜಾರಿ ಎಂಬ ನಕಲಿ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ತೆರೆದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಅವರ ಆಪ್ತ, ಬೈಲೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಂಜುನಾಥ ನಾಯ್ಕ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಹರಡಿದ ಆರೋಪದಲ್ಲಿ ಬೈಲೂರು ದೊಡ್ಡಬಲಸೆಯ ಪುರಂದರ ಮಂಜುನಾಥ ನಾಯ್ಕ (37) ಎಂಬಾತನನ್ನು ಮುರುಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ತನಿಖೆಯಲ್ಲಿ ಪುರಂದರನೇ ಈ ನಕಲಿ ಖಾತೆಗಳ ಹಿಂದಿನ ‘ಮಾಸ್ಟರ್‌ಮೈಂಡ್’ ಎಂಬುದು ಪೊಲೀಸರಿಗೆ ಬಯಲಾಗಿದೆ. ಕೃತ್ಯಕ್ಕೆ ಬಳಸಿದ ಎರಡು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಂತರ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಘಟನೆಯ ಹಿನ್ನಲೆ:ಮೇ 29ರಂದು ಮಂಜುನಾಥ ನಾಯ್ಕ ಎಂಬಾತ ಮುರುಡೇಶ್ವರ ಠಾಣೆಗೆ ಬಂದು “ತೇಜು ನಾಯ್ಕ ಹೊನ್ನಾವರ” ಎಂಬ ಖಾತೆಯಿಂದ ತನ್ನ ಬಗ್ಗೆ ಅಸಭ್ಯ, ಅವಹೇಳನಕಾರಿ ಪೋಸ್ಟ್‌ಗಳು ಪ್ರಕಟವಾಗಿವೆ ಎಂದು ದೂರು ನೀಡಿದ್ದರು.
ಅದಾದ ಕೆಲವು ದಿನಗಳಲ್ಲೇ ಜೂನ್ 6ರಂದು ನಾಗಪ್ಪ ನಾಯ್ಕ ಎಂಬಾತ “ತೇಜು ನಾಯ್ಕ ಹೊನ್ನಾವರ” ಮತ್ತು “ವಂದನಾ ಪೂಜಾರಿ” ಖಾತೆಗಳಿಂದ ಸಚಿವ ಮಂಕಾಳು ವೈದ್ಯರ ವಿರುದ್ಧ ಸುಳ್ಳು ಆರೋಪಗಳಿರುವ 1.29 ನಿಮಿಷದ ವಿಡಿಯೋ ಹಂಚಲಾಗಿದೆ ಎಂದು ದೂರು ನೀಡಿದ್ದರು.
ಈ ಇಬ್ಬರ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿ, ಸೈಬರ್ ಟ್ರೇಸ್ ಮೂಲಕ ಆರೋಪಿಯ ‘ಡಿಜಿಟಲ್ ಹಾದಿ’ ಪತ್ತೆಹಚ್ಚಿದ್ದಾರೆ. ತನಿಖೆಯಲ್ಲಿ ಪುರಂದರ ನಾಯ್ಕನ ಕೈವಾಡ ಸ್ಪಷ್ಟವಾದ ಬಳಿಕ ಅವನನ್ನು ವಶಕ್ಕೆ ಪಡೆಯಲಾಗಿದೆ.
ಮುರುಡೇಶ್ವರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಸುಳ್ಳು ಖಾತೆ ತೆರೆದು, ಅಸಭ್ಯ ಮತ್ತು ಅವಹೇಳನಕಾರಿ ಮಾಹಿತಿಯನ್ನು ಹಂಚುವವರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.


