ಕರಾವಳಿ ವಾಯ್ಸ್ ನ್ಯೂಸ್
ಬೆಂಗಳೂರು: ರಾಜ್ಯದ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆಯೇ ಮತ್ತೊಂದು ಆತಂಕಕಾರಿ ಬೆಳವಣಿಗೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸಗಳಿಗೂ ಬಾಂಬ್ ಬೆದರಿಕೆ ಸಂದೇಶ ಬಂದಿದೆ.
ತಮಿಳುನಾಡಿನ ವ್ಯಕ್ತಿಯೋರ್ವನಿಂದ ಈ ಬೆದರಿಕೆ ಇಮೇಲ್ ಕಳುಹಿಸಲ್ಪಟ್ಟಿರುವ ಶಂಕೆ ವ್ಯಕ್ತವಾಗಿದೆ. aarna.ashwinshekher@outlook.com ಎಂಬ ಐಡಿಯಿಂದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ಇಮೇಲ್‌ಗೆ “ಆರು ಆರ್‌ಡಿಎಕ್ಸ್ ಬಾಂಬ್‌ಗಳು ಇಬ್ಬರ ಮನೆಯಲ್ಲೂ ಫಿಕ್ಸ್ ಆಗಿವೆ, ಶೀಘ್ರದಲ್ಲೇ ರಿಮೋಟ್ ಮೂಲಕ ಸ್ಫೋಟಿಸಲಾಗುವುದು” ಎಂಬ ವಿಷಯದ ಸಂದೇಶ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಸಂದೇಶ ಸ್ವೀಕರಿಸಿದ ತಕ್ಷಣ ಬಾಂಬ್ ಸ್ಕ್ವಾಡ್ ತಂಡ ಸಿಎಂ ಹಾಗೂ ಡಿಸಿಎಂ ನಿವಾಸಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.
ಈ ಸಂಬಂಧ ಅಶ್ವತ್ಥ್ ನಾರಾಯಣಸ್ವಾಮಿ ಎಂಬುವವರು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಗಮನಾರ್ಹವಾಗಿ, ಇತ್ತೀಚೆಗೆ ಬೆಂಗಳೂರಿನಲ್ಲಿ ಶಾಲೆಗಳು, ಕಾಲೇಜುಗಳು, ಕೋರ್ಟ್‌ಗಳು, ಹೋಟೆಲ್‌ಗಳು ಸೇರಿದಂತೆ 30ಕ್ಕೂ ಹೆಚ್ಚು ಕಡೆಗಳಲ್ಲಿ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳು ದಾಖಲಾಗಿವೆ. ಇದೇ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬುಧವಾರವೇ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳ ತನಿಖೆಗೆ ಡಿಸಿಪಿ ಬಿ.ಎಸ್. ನೇಮಗೌಡ ನೇತೃತ್ವದ ವಿಶೇಷ ತನಿಖಾ ತಂಡ (SIT) ರಚಿಸಿತ್ತು.
ಆದರೆ ಅದರ ಬೆನ್ನಲ್ಲೇ ಸಿಎಂ ಮತ್ತು ಡಿಸಿಎಂ ಮನೆಗಳಿಗೆ ಬಂದಿರುವ ಈ ಇಮೇಲ್ ಬೆದರಿಕೆ ಪ್ರಕರಣ ಮತ್ತಷ್ಟು ಕುತೂಹಲ ಹುಟ್ಟಿಸಿದೆ.


