ಕರಾವಳಿ ವಾಯ್ಸ್ ನ್ಯೂಸ್
ಬೆಂಗಳೂರು: ನಗರದಲ್ಲಿ ನಕಲಿ ಪೊಲೀಸ್ ಅಧಿಕಾರಿಯಾಗಿ ಜನರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ವಿದ್ಯಾರಣ್ಯಪುರ ಠಾಣೆ ಪೊಲೀಸರು ನಕಲಿ ಪಿಎಸ್ಐ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಲ್ಲಿಕಾರ್ಜುನ, ಪ್ರಮೋದ್, ವಿನಯ್ ಹಾಗೂ ಹೃತ್ವಿಕ್ ಎಂದು ಗುರುತಿಸಲಾಗಿದೆ. ಮುಖ್ಯ ಆರೋಪಿ ಆರ್.ಪಿ. ಮಲ್ಲಿಕಾರ್ಜುನ ಎರಡು ಬಾರಿ ಪಿಎಸ್ಐ ಪರೀಕ್ಷೆ ಬರೆದು ಅನುತ್ತೀರ್ಣನಾಗಿದ್ದರೂ, ತನ್ನ ಊರಾದ ಸಿರಗುಪ್ಪದಲ್ಲಿ ತಾನು ಬೆಂಗಳೂರಿನಲ್ಲಿ ಪಿಎಸ್ಐ ಆಗಿರುವುದಾಗಿ ಸುಳ್ಳು ಹೇಳಿಕೊಂಡು ಬಿಲ್ಡಪ್ ಮಾಡಿಕೊಂಡಿದ್ದನು. ಪೊಲೀಸ್ ಯೂನಿಫಾರ್ಮ್, ಕ್ಯಾಪ್, ಶೂ, ಲಾಠಿ ಧರಿಸಿ ಫೋಟೋ ಶೂಟ್ ಕೂಡ ಮಾಡಿಸಿಕೊಂಡಿದ್ದಾನೆ ಎನ್ನಲಾಗಿದೆ.
ಆರೋಪಿಗಳು ಬೆಂಗಳೂರಿನಲ್ಲಿ ನಕಲಿ ಪೊಲೀಸ್ ಅಧಿಕಾರಿಗಳಂತೆ ವರ್ತಿಸಿ, ಜನರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದರು. ಹೃತ್ವಿಕ್ ನೀಡಿದ ಮಾಹಿತಿಯಂತೆ ನವೀನ್ ಎಂಬಾತನ ಮನೆಯಲ್ಲಿ ಹಣ ಹಾಗೂ ಚಿನ್ನಾಭರಣ ಸಿಗುತ್ತದೆ ಎಂಬುದನ್ನು ತಿಳಿದು, ಪಕ್ಕಾ ಯೋಜನೆ ರೂಪಿಸಿ ಪೊಲೀಸ್ ವೇಷದಲ್ಲಿ ಕಾರಿನಲ್ಲಿ ನವೀನ್ ಮನೆಗೆ ನುಗ್ಗಿದ್ದಾರೆ.
“ನೀನು ಗಾಂಜಾ ಮಾರುತ್ತಿದ್ದೀಯ, ನಿನ್ನ ಮೇಲೆ ಪ್ರಕರಣ ದಾಖಲಾಗಿದೆ. ಮನೆ ಶೋಧನೆ ಮಾಡಬೇಕು” ಎಂದು ಬೆದರಿಸಿ ಲಾಠಿ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಪ್ರಕರಣ ದಾಖಲಾಗಬಾರದೆಂದರೆ ಹಣ ಕೊಡಬೇಕು ಎಂದು ಹೇಳಿ ನವೀನ್ ಅವರಿಂದ ಆನ್ಲೈನ್ ಮೂಲಕ 87 ಸಾವಿರ ರೂಪಾಯಿ ವರ್ಗಾಯಿಸಿಕೊಂಡಿದ್ದಾರೆ. ಜೊತೆಗೆ ಮನೆಯಲ್ಲಿದ್ದ 53 ಸಾವಿರ ರೂಪಾಯಿ ಹಾಗೂ ಪರ್ಸ್ನಲ್ಲಿದ್ದ 2 ಸಾವಿರ ರೂಪಾಯಿಯನ್ನು ದೋಚಿ ಪರಾರಿಯಾಗಿದ್ದಾರೆ.
ಘಟನೆ ಬಗ್ಗೆ ಅನುಮಾನಗೊಂಡ ನವೀನ್ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಈ ವೇಳೆ ನಕಲಿ ಪಿಎಸ್ಐ ಆಟ ಬಯಲಾಗಿದೆ. ಪ್ರಕರಣ ಸಂಬಂಧ ಮುಂದಿನ ತನಿಖೆ ಮುಂದುವರಿದಿದೆ.

